ಬೆಂಗಳೂರಿನಿಂದ ಕೇರಳಕ್ಕೆ ನಕಲಿ ಸಿಗರೇಟ್ ಸಾಗಾಟ: ಸಿಸಿಬಿ ಬಲೆಗೆ ಇಬ್ಬರು..!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ಸಿಗರೇಟ್ಗಳ ಅಕ್ರಮ ಸಾಗಾಟ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಉಪ್ಪಾರಪೇಟೆ ಪೊಲೀಸರು ಹಾಗೂ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಒಟ್ಟು ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರಿನಿಂದ ಕೇರಳಕ್ಕೆ ಎರಡು ಟ್ರಾಲಿ ಬ್ಯಾಗ್ಗಳಲ್ಲಿ ನಕಲಿ ಸಿಗರೇಟ್ಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಮಹಮದ್ ರಿಯಾಝ್ ಹಾಗೂ ಕುಮಾರನ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸುಮಾರು ₹20 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದೇ ವೇಳೆ, ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ₹10 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮದ್ ಗುಲ್ಜಾರ್ ಎಂಬಾತನನ್ನು ಬಂಧಿಸಲಾಗಿದೆ.
ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದು, ₹30 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳನ್ನು ಜಪ್ತಿ ಮಾಡಿದ್ದಾರೆ.
ನಕಲಿ ಸಿಗರೇಟ್ಗಳ ಮೂಲ ಯಾವುದು, ಅವುಗಳನ್ನು ಎಲ್ಲಿಂದ ತರಲಾಗಿತ್ತು ಹಾಗೂ ಈ ಅಕ್ರಮ ಸಾಗಾಟದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.



