ಕ್ರೈಮ್

LIC ಹಣಕ್ಕಾಗಿ ಸ್ವಂತ ತಮ್ಮನನ್ನೇ ಕಾರು ಹತ್ತಿಸಿ, ಕುತ್ತಿಗೆ ಬಿಗಿದು ಕೊ*ದ ಪಾಪಿ ಅಣ್ಣ!

ತುಮಕೂರು: ಹಣದ ಕ್ರೂರ ವ್ಯಾಮೋಹ ಮನುಷ್ಯನನ್ನು ಎಷ್ಟು ಮಟ್ಟಿಗೆ ರಾಕ್ಷಸನನ್ನಾಗಿ ಮಾಡುತ್ತದೆ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ಬೆಚ್ಚಿಬೀಳಿಸುವ ಘಟನೆಯೇ ಸಾಕ್ಷಿ. ವಿಮಾ (LIC) ಹಣಕ್ಕಾಗಿ ಸ್ವಂತ ಕರುಳಿನ ಕುಡಿಯನ್ನೇ ಅತ್ಯಂತ ಅಮಾನುಷವಾಗಿ ಕೊಲೆ ಮಾಡಿ, ಅದನ್ನೊಂದು ಬೈಕ್ ಅಪಘಾತ ಎಂದು ಬಿಂಬಿಸಲು ಹೋಗಿದ್ದ ಪಾಪಿ ಅಣ್ಣ ಹಾಗೂ ಆತನ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ!

ಏನಿದು ಮಾಸ್ಟರ್ ಪ್ಲಾನ್?

ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ನಿದ್ರಗಟ್ಟ ಗ್ರಾಮದ ರಮೇಶ್ (35) ಕೊಲೆಯಾದ ದುರ್ದೈವಿ. ಈತನ ಸ್ವಂತ ಅಣ್ಣ ಹನುಮಂತರಾಜುನೇ ಈ ಭೀಕರ ಕೃತ್ಯದ ಮಾಸ್ಟರ್ ಮೈಂಡ್. ತಮ್ಮನ ಹೆಸರಿನಲ್ಲಿ 15 ಲಕ್ಷ ರೂ. ಮೌಲ್ಯದ ಎಲ್.ಐ.ಸಿ ಪಾಲಿಸಿ ಮಾಡಿಸಿದ್ದ ಹನುಮಂತರಾಜು, ಒಂದು ವೇಳೆ ಅಪಘಾತದಲ್ಲಿ ತಮ್ಮ ಮೃತಪಟ್ಟರೆ ‘ಡಬಲ್ ಆಕ್ಸಿಡೆಂಟಲ್ ಬೆನಿಫಿಟ್’ ಸಿಗುತ್ತದೆ, ಅಂದರೆ ಬರೋಬ್ಬರಿ 30 ಲಕ್ಷಕ್ಕೂ ಹೆಚ್ಚು ಹಣ ಕೈಸೇರುತ್ತದೆ ಎಂಬ ದುರಾಸೆಯಿಂದ ಕಳೆದ ಎರಡು ವರ್ಷಗಳ ಹಿಂದೆಯೇ 85 ಸಾವಿರ ರೂ. ಪ್ರೀಮಿಯಂ ಕಟ್ಟಿ ಕೊಲೆಗೆ ಸ್ಕೆಚ್ ಹಾಕಿದ್ದ!

​ಮಾಟ-ಮಂತ್ರದ ನೆಪ, ಶಿರಾ ಬಳಿ ಕರೆಸಿಕೊಂಡ ಕಿರಾತಕರು:

ಮೃತ ರಮೇಶ್ ಬ್ಲಾಕ್ ಮ್ಯಾಜಿಕ್ ಹಾಗೂ ತಂತ್ರ ವಿದ್ಯೆಗಳಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಹನುಮಂತರಾಜು, ಇದನ್ನೇ ತನ್ನ ಕೊಲೆ ಯೋಜನೆಗೆ ದಾಳವಾಗಿ ಬಳಸಿಕೊಂಡ. ಕಳೆದ ಜೂನ್ 19ರಂದು “ಶಿರಾ ಬಳಿ ನಿಧಿ ಇದೆ, ಪೂಜೆ ಮಾಡೋಕೆ ಬಾ” ಎಂದು ನಂಬಿಸಿ ರಮೇಶನನ್ನು ಕರೆಸಿಕೊಂಡಿದ್ದಾನೆ.

ಅಮಾನುಷ ಹತ್ಯೆ ನಡೆದಿದ್ದು ಹೀಗೆ…

ಶಿರಾ ಮತ್ತು ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ರಮೇಶನನ್ನು ಕರೆತಂದ ಹನುಮಂತರಾಜು ಹಾಗೂ ಆತನ ಸಹಚರರು ಮೊದಲು ದೊಣ್ಣೆಯಿಂದ ರಮೇಶನ ಮರ್ಮಾಂಗಕ್ಕೆ ಬಲವಾಗಿ ಹೊಡೆದಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಅಮಾನುಷವಾಗಿ ನಾಲ್ಕೈದು ಬಾರಿ ರಮೇಶನ ಮೈಮೇಲೆಯೇ ಕಾರು ಹತ್ತಿಸಿ ಕ್ರೌರ್ಯ ಮೆರೆದಿದ್ದಾರೆ. ಇಷ್ಟೆಲ್ಲಾ ಹಲ್ಲೆ ಮಾಡಿದ್ರೂ ರಮೇಶ್ ಬದುಕಿದ್ದನ್ನು ಕಂಡು ಗಾಬರಿಯಾದ ಕಿರಾತಕರು, ಕೊನೆಗೆ ಬ್ಯಾಟರಿ ಜಂಪ್ ವೈಯರ್‌ನಿಂದ ಕುತ್ತಿಗೆ ಬಿಗಿದು ಜೀವ ತೆಗೆದಿದ್ದಾರೆ!

ಅಪಘಾತದ ಡ್ರಾಮಾ ಮಾಡಲು ಹೋಗಿ ಸಿಕ್ಕಿಬಿದ್ದರು!

ಕೊಲೆ ಮಾಡಿದ ನಂತರ ಕೃತ್ಯವನ್ನು ಮುಚ್ಚಿಹಾಕಲು, ಕೊಲೆ ನಡೆದ ಸ್ಥಳದಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲಿ ರಮೇಶನ ಬೈಕ್ ಬೀಳಿಸಿ, ಅದರ ಪಕ್ಕದಲ್ಲೇ ಶವವನ್ನು ಎಸೆದು ಇದೊಂದು ಬೈಕ್ ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ್ದರು.

ಪೊಲೀಸರ ಚಾಣಾಕ್ಷತನ – 12 ಗಂಟೆಯೊಳಗೆ ಕೇಸ್ ಕ್ಲೋಸ್!

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಿರಾ ಡಿವೈಎಸ್ಪಿ ಜಿ. ಶೇಖರ್ ಅವರಿಗೆ ಘಟನಾ ಸ್ಥಳವನ್ನು ನೋಡಿದ ತಕ್ಷಣವೇ ತೀವ್ರ ಅನುಮಾನ ಬಂದಿದೆ. ಏಕೆಂದರೆ ಅಲ್ಲಿ ಬೈಕ್ ಅಪಘಾತ ನಡೆದಿದ್ದಕ್ಕೆ ಯಾವುದೇ ಪೂರಕ ಸಾಕ್ಷ್ಯಗಳು ಇರಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತರಾದ ಪಟ್ಟನಾಯಕನಹಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿ, ಘಟನೆ ನಡೆದ ಕೇವಲ 12 ಗಂಟೆಯೊಳಗೆ ಇಡೀ ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ.

​ಸ್ವಂತ ತಮ್ಮನನ್ನೇ ಕೊಂದ ಪಾಪಿ ಅಣ್ಣ ಹನುಮಂತರಾಜು ಹಾಗೂ ಈ ಕೃತ್ಯಕ್ಕೆ ಸಾಥ್ ನೀಡಿದ್ದ ಲಕ್ಷ್ಮೀಕಾಂತ, ನವೀನ್ ಕುಮಾರ್, ಮತ್ತು ಎಂಡಿ ಜಿಲಾನ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಸದ್ಯ ಕಬ್ಬಿಣದ ಸರಳಿನ ಹಿಂದೆ ತಳ್ಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker