ಅಮಾವಾಸ್ಯೆ ಪೂಜೆ ಮುಗಿಸಿ ಬಂದ ಪೂಜಾರಿ ಶವವಾಗಿ ಪತ್ತೆ; ಹತ್ಯೆ ಹಿಂದಿನ ರಹಸ್ಯವೇನು?

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಹರಳೇರಿ ಸಮೀಪ ಅಮಾವಾಸ್ಯೆ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಪೂಜಾರಿಯೊಬ್ಬರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಹುಲ್ಕೂರು ಗ್ರಾಮದ ಕಾಳಿ ದೇವಾಲಯದ ಪೂಜಾರಿ ಆಂಜಿ ಅಲಿಯಾಸ್ ಆಂಜಿನಪ್ಪ (45) ಮೃತ ದುರ್ದೈವಿ. ಭಾನುವಾರ ಪುಷ್ಯ ಅಮಾವಾಸ್ಯೆ ವಿಶೇಷ ಪೂಜೆ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ದಾರಿ ಮಧ್ಯೆ ಅಡ್ಡಗಟ್ಟಿ, ಮುಖಕ್ಕೆ ಖಾರದ ಪುಡಿ ಎರಚಿ ಲಾಂಗ್ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಆಂಜಿನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಂಜಿನಪ್ಪ ಅವರು ದೇವಾಲಯದಲ್ಲಿ ಪೂಜೆ ನಡೆಸುವುದರ ಜೊತೆಗೆ ಮಾಟ-ಮಂತ್ರ ಹಾಗೂ ದೆವ್ವ ಬಿಡಿಸುವ ಪೂಜೆಗಳನ್ನೂ ಮಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಮಾಲೂರಿನಲ್ಲಿ ಬೂಸಾ ಅಂಗಡಿ ನಡೆಸಿ ಜೀವನ ಸಾಗಿಸುತ್ತಿದ್ದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಲೂರು ಪೊಲೀಸರು, ಶ್ವಾನದಳ ಹಾಗೂ ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಅಥವಾ ಇತರೆ ವೈಮನಸ್ಸಿನ ಹಿನ್ನೆಲೆ ಇದೆಯೇ ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



