ಕ್ರೀಡೆ

15ನೇ ವಯಸ್ಸಿಗೆ ಅವನ ಕೈಯಲ್ಲಿ ಟೀಮ್ ಇಂಡಿಯಾ ಜರ್ಸಿ! ಜರ್ಸಿ ತಂದು ಕೊಟ್ಟ ರಾಘವೇಂದ್ರನ ಕಾಲು ಮುಟ್ಟಿ ನಮಸ್ಕರಿಸಿ ಬಿಟ್ಟ ಸೂರ್ಯವಂಶಿ!

ಎರಡು ದಿನಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಸುನಾಮಿ ಎಬ್ಬಿಸಿದವನು ನೇರವಾಗಿ ಬಂದಿಳಿದದ್ದು ಚೆನ್ನೈಗೆ. ಐರ್ಲೆಂಡ್’ಗೆ ಪ್ರಯಾಣಿಸಬೇಕಿದ್ದ ಭಾರತ ಟಿ20 ತಂಡದ ಆಟಗಾರರು ತಂಗಿದ್ದ ಹೋಟೆಲ್’ಗೆ ಬಂದಿದ್ದ ವೈಭವ್ ಸೂರ್ಯವಂಶಿ..

ಸೋಮವಾರ ಸಂಜೆಯ ಸಮಯ..

ಟಕ್.. ಟಕ್.. ಟಕ್..

ಬಾಗಿಲು ತಟ್ಟುವ ಸದ್ದು..

ಬಾಗಿಲು ತೆರೆದರೆ ಎದುರಲ್ಲಿ ಕೈ ಮುಗಿದು ನಿಂತಿದ್ದ ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ.

ತಂಡದ ಆತ್ಮ, ಹೃದಯ, ಉಸಿರು ಅವನು.. ಇಡೀ ಭಾರತ ತಂಡದಲ್ಲಿ ಪ್ರತಿಯೊಬ್ಬರೂ ಒಬ್ಬ ವ್ಯಕ್ತಿಯನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ ಎಂದರೆ ಅದು ರಾಘವೇಂದ್ರ..

ತನಗಿಂತ 25 ವರ್ಷ ಕಿರಿಯನಿಗೆ ಕೈಮುಗಿದು ನಿಂತ ವ್ಯಕ್ತಿಗೆ ಪ್ರತಿಯಾಗಿ ಕೈ ಎತ್ತಿ ಮುಗಿದ ಸೂರ್ಯವಂಶಿ, ಅವನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಬಿಟ್ಟ. ಅದು ತಂಡದಲ್ಲಿ ರಾಘವೇಂದ್ರ ಸಂಪಾದಿಸಿರುವ ಗೌರವದ ಪ್ರತೀಕ..

ವೈಭವ್ ಸೂರ್ಯವಂಶಿಯ ನಂ.3 ಜರ್ಸಿಯನ್ನು ತಂದಿದ್ದ ರಾಘವೇಂದ್ರ.. ಜರ್ಸಿಯನ್ನು ನೋಡಿದವನೇ ಭಾವುಕನಾಗಿ ಬಿಟ್ಟ ಹುಡುಗ..

‘’ನನಗಾಗುತ್ತಿರುವ ಖುಷಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.. ಇದಕ್ಕಾಗಿಯೇ ನಾನು ಬ್ಯಾಟ್ ಹಿಡಿದಿದ್ದೆ, ಕ್ರಿಕೆಟ್ ಮೈದಾನಕ್ಕೆ ಹೋಗುತ್ತಿದ್ದೆ. ನನ್ನ ಜೀವನದ ದೊಡ್ಡ ಕನಸು ನನಸಾಗಿದೆ ಈ ದಿನ. ನನ್ನ ಕ್ರಿಕೆಟ್ ಪ್ರಯಾಣದಲ್ಲಿ ಅತೀ ದೊಡ್ಡ ಹೆಜ್ಜೆ ಇವತ್ತು ಪೂರ್ತಿಯಾಗಿದೆ’’ ಎಂದ ಸೂರ್ಯವಂಶಿ.

ಎಂಥಾ ಕ್ಷಣವದು..

150 ಕೋಟಿ ಜನಸಂಖ್ಯೆಯ ದೇಶದಲ್ಲಿ.. ಕೇವಲ 15 ಮಂದಿ ಆಯ್ಕೆಯಾಗುವ ತಂಡದಲ್ಲಿ.. 15 ವರ್ಷದ ಒಬ್ಬ ಹುಡುಗ ಭಾರತ ಕ್ರಿಕೆಟ್ ತಂಡದ ಜರ್ಸಿ ತೊಡುತ್ತಾನೆ ಎಂದರೆ ಇದೇನು ಸಾಮಾನ್ಯವಲ್ಲ.. ಅಸಾಮಾನ್ಯ ಸಾಧನೆಯಿದು.

ಇಲ್ಲಿಯವರೆಗೆ ಒಂದು ಲೆಕ್ಕ.. ಇನ್ನು ಮುಂದೆ ಮತ್ತೊಂದು ಲೆಕ್ಕ.. ಐಪಿಎಲ್’ನಲ್ಲಿ ಅಬ್ಬರಿಸಿದವನು, ಭಾರತ ಅಂಡರ್-19, ಭಾರತ ಎ ಪರ ವೀರಾವೇಶದ ಶತಕಗಳನ್ನು ಬಾರಿಸಿದವನು ಈಗ ಭಾರತ ಸೀನಿಯರ್ ತಂಡದ ಆಟಗಾರ.. ಕ್ರಿಕೆಟ್ ಧ್ರುವತಾರೆ ಸಚಿನ್ ತೆಂಡೂಲ್ಕರ್ ಭಾರತ ಪರ ಆಡಿದ್ದು 16ನೇ ವರ್ಷಕ್ಕೆ. ಈ ಹುಡುಗ 15ನೇ ವಯಸ್ಸಿಗೆ ಭಾರತ ಟಿ20 ತಂಡಕ್ಕೆ ಕಾಲಿಟ್ಟಿದ್ದಾನೆ..

ಸೂರ್ಯವಂಶಿಗೆ ಅಸಲಿ ಅಗ್ನಿಪರೀಕ್ಷೆ ಎದುರಾಗಲಿರುವುದು ಇಲ್ಲೇ. ಅಲ್ಲಿ ರಾಘವೇಂದ್ರ ದಿವಗಿಯನ್ನು ಎದುರಿಸಿ ನಿಲ್ಲಬೇಕು ಅವನು.. ಸುಲಭವಲ್ಲ ಅದು.. ಕಾರಣ, ಅವನ ರಟ್ಟೆಗಳಿಂದ ನುಗ್ಗಿ ಬರಲಿರುವುದು ಚೆಂಡುಗಳಲ್ಲ, ಬೆಂಕಿ ಚೆಂಡುಗಳು.

ವಿರಾಟ್ ಕೊಹ್ಲಿ ವಿಶ್ವಶ್ರೇಷ್ಠ ದಾಂಡಿಗನಾಗಿದ್ದಾನೆ ಎಂದರೆ ಅದಕ್ಕೆ ಕಾರಣ ರಾಘವೇಂದ್ರ.. ಇದು ಅವರಿವರು ಹೇಳಿದ್ದಲ್ಲ.. ಸ್ವತಃ ವಿರಾಟನೇ ಹೇಳಿದ್ದ ಮಾತು.

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಭಯಾನಕ ಬೌನ್ಸಿ ಟ್ರ್ಯಾಕ್’ಗಳಲ್ಲಿ.. ಇಂಗ್ಲೆಂಡ್’ನ ಸ್ವಿಂಗಿಂಗ್ ವಿಕೆಟ್’ಗಳಲ್ಲಿ ಭಾರತ ತಂಡದ ಬ್ಯಾಟರ್’ಗಳು 2014ರಿಂದ ಈಚೆಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದ್ದಾರೆ ಎಂದರೆ ಅದರ ಹಿಂದೆ ರಾಘವೇಂದ್ರನ ಪಾತ್ರ ದೊಡ್ಡದು.

ಅವನು ನೆಟ್ಸ್’ನಲ್ಲಿ ಎಸೆಯುವ ಚೆಂಡುಗಳ ಸರಾಸರಿ ವೇಗವೇ ಗಂಟೆಗೆ 150 ಕಿ.ಮೀ.. ಗಂಟೆಗೆ 164 ಕಿ.ಮೀ ವೇಗದಲ್ಲಿ ಚೆಂಡೆಸೆದದ್ದೂ ಇದೆ. ಅಂಥಾ ವೇಗಕ್ಕೆ ಎದೆಯೊಡ್ಡಿಯೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್’ನಂಥಾ ದಾಂಡಿಗರು ವರ್ಲ್ಡ್ ಕ್ಲಾಸ್ ಎನಿಸಿಕೊಂಡದ್ದು..

ಅಂಥಾ ರಾಘವೇಂದ್ರನನ್ನು ನೆಟ್ಸ್’ನಲ್ಲಿ ಎದುರಿಸಿ ನಿಲ್ಲಬೇಕಿದೆ ಈ ಹದಿನೈದರ ಹೈದ.. ಇಲ್ಲಿಯವರೆಗೆ ಬುಮ್ರಾ, ರಬಾಡ, ಸಿರಾಜ್, ಪ್ಯಾಟ್ ಕಮಿನ್ಸ್, ಮಿಚೆಸ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್’ರಂಥಾ ದೈತ್ಯರನ್ನು ಎದುರಿಸಿರುವ ಸೂರ್ಯವಂಶಿಗೆ ರಾಘವೇಂದ್ರನಿಂದ ಎದುರಾಗಲಿರುವ ಸವಾಲೇ ಬೇರೆ..

ಆಗಲೇ ಹೇಳಿದ ಹಾಗೆ ರಾಘವೇಂದ್ರ ಬೆಂಕಿ ಚೆಂಡುಗಳನ್ನು ಎಸೆಯುವ ಥ್ರೋಡೌನ್ ಸ್ಪೆಷಲಿಸ್ಟ್.. ಅವನನ್ನು ನೆಟ್ಸ್’ನಲ್ಲಿ ಎದುರಿಸಿದಂತೆಲ್ಲಾ ವೈಭವ್ ಸೂರ್ಯವಂಶಿ ಮತ್ತಷ್ಟು ಕಲಿಯುತ್ತಾನೆ, ಆಟದಲ್ಲಿ ಉತ್ತಮನಾಗುತ್ತಾ ಹೋಗುತ್ತಾನೆ.

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker