ಮದುವೆಗೆ ಇದ್ದದ್ದು ಕೇವಲ 24 ಗಂಟೆ.. ಅಷ್ಟರಲ್ಲಿ ಇಡೀ ಮನೆ ಸ್ಮಶಾನವಾಯ್ತು!

ಈ ಪ್ರೀತಿ ಪ್ರೇದ ಹುಚ್ಚು ಕೆಲವರನ್ನ ಹುಚ್ಚರನ್ನಾಗಿ ಮಾಡಿಬಿಡುತ್ತೆ. ನಾವು ಏನ್ ಮಾಡ್ತಿದ್ದೀವಿ. ಏನ್ ಮಾಡ್ಬೇಕು? ಎಲ್ಲಿದ್ದೀವಿ. ನನ್ನಿಂದ ಏನ್ ಪರಿಣಾಮ ಆಗುತ್ತೆ ಅನ್ನೋ ಪರಿಜ್ಞಾನವೇ ಇರಲ್ಲ. ಇಂಥವರಿಂದ ಅದೆಷ್ಟೋ ದುರಂತಗಳು ನಡೆದು ಹೋಗಿವೆ. ಇಲ್ಲಿ ಆಗಿರೋದೂ ಕೂಡ ಅದೇ.
ರಕ್ಷಿತಾಳದ್ದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮ. ಅಪ್ಪ, ಅಮ್ಮನಿಗೆ ಒಬ್ಬಳೇ ಮಗಳು. ಚಿಕ್ಕ ಕುಟುಂಬ. ಅಪ್ಪ ಟ್ರ್ಯಾಕ್ಟರ್ ಡ್ರೈವರ್ ಆಗಿದ್ರೂ ಮಗಳಿಗೆ ಯಾವುದೇ ಕೊರತೆ ಮಾಡ್ತಿರಲಿಲ್ಲ. ಕುಟುಂಬ ನೆಮ್ಮದಿಯಾಗಿತ್ತು. ಆದ್ರೆ ಸುಂದರ ಕುಟುಂಬಕ್ಕೆ ಎಂಟ್ರಿಯಾಗಿದ್ದು, ಉಲ್ಲಾಸ್ ಗೌಡ ಎಂಬ ಕಿರಾತಕ.

ಉಲ್ಲಾಸ್ ಗೌಡ ಕೂಡ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದರಿಂದ ರಕ್ಷಿತಾ ತಂದೆ ಶಿವಣ್ಣನ ಸ್ನೇಹ ಬೆಳೆಸಲು ತುಂಬಾದಿನ ಬೇಕಾಗಿರಲಿಲ್ಲ. ಪರಿಚಯವಾಗಿದ್ದರಿಂದ ಆಗಾಗ್ಗೆ ಅವರ ಮನೆಗೂ ಬರ್ತಿದ್ದ. ಈ ವೇಳೆ ಮಗಳು ರಕ್ಷಿತಾಳನ್ನ ನೋಡಿ ಹುಚ್ಚನಂತಾಗಿದ್ದ. ಅವಳನ್ನ ಪ್ರೀತಿ ಮಾಡ್ತಿದ್ದೀನಿ, ಮದುವೆಯಾಗ್ತೀನಿ ಅಂತೆಲ್ಲ ಎಲ್ಲಾ ಕಡೆ ಹೇಳಿಕೊಂಡು ಬಂದಿದ್ದ. ವಿಷಯ ತಿಳಿದ ಶಿವಣ್ಣ ಆತನನ್ನ ದೂರ ಇಟ್ಟಿದ್ರು. ಆದ್ರೆ, ಆತನಲ್ಲಿನ ಕ್ರೌರ್ಯವನ್ನ ಹೆಚ್ಚು ಮಾಡಿತ್ತು.
ಕಳೆದ ಎರಡು ವರ್ಷಗಳಿಂದ ಪಾಪಿ ಉಲ್ಲಾಸ್ನನ್ನ ಶಿವಣ್ಣ ದೂರ ಇಟ್ಟಿದ್ರು. ಈ ಮಧ್ಯೆ ಮಗಳು ರಕ್ಷಿತಾಳ ಕಾಲೇಜು ಮುಗಿದಿದ್ರಿಂದ ಮದುವೆ ಮಾಡೋಕೆ ಮುಂದಾಗಿದ್ರು. ಸಂತೋಷ್ ಎಂಬಾತನ ಜೊತೆ ಮದುವೆ ನಿಶ್ಚಿಯ ಮಾಡಿದ್ರು. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಆ ಮನೆಯಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಬೇಕಿತ್ತು. ಆದ್ರೆ ಅಲ್ಲಿ ಆಗಿದ್ದೇ ಬೇರೆ.
ರಕ್ಷಿತಾಳ ಮದುವೆ ಫಿಕ್ಸ್ ಆಗ್ತಿದ್ದಂತೆ ಹುಚ್ಚನಂತಾದ ಉಲ್ಲಾಸ್ ಗೌಡ ರಕ್ಷಿತಾಳ ಮೇಲೆ ಇಲ್ಲಸಲ್ಲದ ಕಥೆ ಕಟ್ಟಿ, ಭಾವಿಗಂಡನ ಜೊತೆ ಫಿಟಿಂಗ್ ಇಟ್ಟಿದ್ದಾನೆ. ಇದಕ್ಕೆ ಅವರೂ ಕೂಡ ಕ್ಯಾರೆ ಅಂದಿಲ್ಲ. ಆದ್ರೆ ಮರ್ಯಾದಸ್ತ ಹೆಣ್ಣುಮಗಳು ಈತನ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾಳೆ. ಮದುವೆ ಮನೆಗೆ ನುಗ್ಗಿ ಈತ ಎಲ್ಲಿ ಮರ್ಯಾದೆ ಕಳೆಯುತ್ತಾನೋ ಅಂತ ಭಯದಿಂದ ಮದುವೆಗೆ ಅಂತ ತಂದಿದ್ದ ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿಕೊಂಡು ತಿಂದು ತಂದೆ,ತಾಯಿ, ಮಗಳು ಮೂವರೂ ಪ್ರಾಣಬಿಟ್ಟಿದ್ದಾರೆ.
ಇನ್ನು ಉಲ್ಲಾಸ್ ಗೌಡನ ಕಿರುಕುಳದ ಬಗ್ಗೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಈಗ ವರುಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿರಾತಕನಿಗಾಗಿ ಹುಡುಕಾಡ್ತಿದ್ದಾರೆ.
ಇತ್ತ ಮದುವೆ ಸಂಭ್ರಮ ಕಳೆಗಟ್ಟಬೇಕಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಕಣ್ಣೀರಿಡಲೂ ಕೂಡ ಮನೆಯಲ್ಲಿ ಒಬ್ಬರೂ ಇಲ್ಲವಾಗಿದೆ.



