ಆರೋಗ್ಯ

ದೀಪಾವಳಿ ಹಬ್ಬಕ್ಕೆ ಮಾಡಿ ಮೈಸೂರ್ ಪಾಕ್ ರುಚಿಯ ಸ್ಪೆಷಲ್ ಕ್ಯಾರೆಟ್ ಪಾಯಸ; ಇಲ್ಲಿದೆ ಸುಲಭ ರೆಸಿಪಿ!

ಬೆಂಗಳೂರು: ಹಬ್ಬ ಅಂದಮೇಲೆ ಮನೆಯಲ್ಲಿ ಸಿಹಿ ತಿನಿಸುಗಳ ಸಂಭ್ರಮ ಇರಲೇಬೇಕು. ಅದರಲ್ಲೂ ದೀಪಾವಳಿ ಹಬ್ಬಕ್ಕೆ ಬಗೆಬಗೆಯ ಸಿಹಿ ಖಾದ್ಯಗಳನ್ನು ತಯಾರಿಸುವುದು ವಿಶೇಷ. ಸಾಮಾನ್ಯವಾಗಿ ಶ್ಯಾವಿಗೆ ಪಾಯಸ, ಬೇಳೆ ಪಾಯಸ ಸೇರಿದಂತೆ ಹಲವು ಸಿಹಿ ಖಾದ್ಯಗಳನ್ನು ಮಾಡುತ್ತೇವೆ. ಆದರೆ ಈ ಬಾರಿ ದೀಪಾವಳಿಗೆ ಹೊಸ ರುಚಿಯ ಸಿಹಿ ತಿನಿಸು ತಯಾರಿಸುವ ಆಸೆ ಇದ್ದರೆ ಮೈಸೂರ್ ಪಾಕ್ ರುಚಿ ನೀಡುವ ಸ್ಪೆಷಲ್ ಕ್ಯಾರೆಟ್ ಪಾಯಸವನ್ನು ಟ್ರೈ ಮಾಡಿ.

ಕ್ಯಾರೆಟ್‌ನ ಆರೋಗ್ಯಕರ ಗುಣಗಳ ಜೊತೆಗೆ ಮೈಸೂರ್ ಪಾಕ್‌ನ ವಿಶಿಷ್ಟ ರುಚಿಯನ್ನು ಹೊಂದಿರುವ ಈ ಪಾಯಸವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹಾಗಾದರೆ ಈ ವಿಶೇಷ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು? ಮಾಡುವ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೈಸೂರ್ ಪಾಕ್ ರುಚಿಯ ಹಿಂದಿರುವ ಸೀಕ್ರೆಟ್ ಏನು?

ಸಾಮಾನ್ಯ ಕ್ಯಾರೆಟ್ ಪಾಯಸಕ್ಕೂ ಈ ವಿಶೇಷ ಪಾಯಸಕ್ಕೂ ಇರುವ ವ್ಯತ್ಯಾಸ ಅದರಲ್ಲಿರುವ ಕಡ್ಲೆಹಿಟ್ಟು. ಹೌದು, ಕ್ಯಾರೆಟ್ ಪಾಯಸಕ್ಕೆ ಸ್ವಲ್ಪ ಕಡ್ಲೆಹಿಟ್ಟು ಸೇರಿಸುವುದರಿಂದ ಮೈಸೂರ್ ಪಾಕ್‌ನಂತಹ ವಿಶಿಷ್ಟ ರುಚಿ ಸಿಗುತ್ತದೆ. ತುಪ್ಪದಲ್ಲಿ ಹುರಿದ ಕಡ್ಲೆಹಿಟ್ಟು, ಕ್ಯಾರೆಟ್ ಮತ್ತು ಬಾದಾಮಿಯ ಮಿಶ್ರಣ ಈ ಪಾಯಸಕ್ಕೆ ವಿಶೇಷ ಸ್ವಾದ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು:

  • ಎರಡು ಕ್ಯಾರೆಟ್
  • ಎಂಟು ಬಾದಾಮಿ
  • ಒಂದು ಲೋಟ ಹಾಲು
  • ಎರಡು ಚಮಚ ತುಪ್ಪ
  • ಸ್ವಲ್ಪ ಗೋಡಂಬಿ
  • ಎರಡು ಚಮಚ ಕಡ್ಲೆಹಿಟ್ಟು
  • ಸಕ್ಕರೆ (ರುಚಿಗೆ ತಕ್ಕಷ್ಟು)
  • ಏಲಕ್ಕಿ ಪುಡಿ
  • ಕೇಸರಿ ದಳ (ಐಚ್ಛಿಕ)

ತಯಾರಿಸುವ ವಿಧಾನ:

ಹಂತ 1: ಮೊದಲಿಗೆ ಎರಡು ಕ್ಯಾರೆಟ್‌ಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಎಂಟು ಬಾದಾಮಿ ಹಾಗೂ ಒಂದು ಲೋಟ ಹಾಲು ಸೇರಿಸಿ ಕುಕ್ಕರ್‌ನಲ್ಲಿ ಮೂರು ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ.

ಹಂತ 2: ಬೆಂದ ಬಳಿಕ ಬಾದಾಮಿಯ ಸಿಪ್ಪೆ ತೆಗೆದು, ಕ್ಯಾರೆಟ್ ಮತ್ತು ಬಾದಾಮಿಯನ್ನು ಬೇಯಿಸಿದ ಹಾಲಿನೊಂದಿಗೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಹಂತ 3: ಈಗ ಒಂದು ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಗೋಡಂಬಿಯನ್ನು ಹುರಿದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಗೆ ಎರಡು ಚಮಚ ಕಡ್ಲೆಹಿಟ್ಟು ಸೇರಿಸಿ ಮಧ್ಯಮ ಉರಿಯಲ್ಲಿ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ.

ಹಂತ 4: ಕಡ್ಲೆಹಿಟ್ಟು ಚೆನ್ನಾಗಿ ಹುರಿದ ಬಳಿಕ ಅದಕ್ಕೆ ಮೊದಲೇ ತಯಾರಿಸಿಟ್ಟುಕೊಂಡ ಕ್ಯಾರೆಟ್ ಮತ್ತು ಬಾದಾಮಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಹಾಲನ್ನು ಸೇರಿಸಿ ಕುದಿಯಲು ಬಿಡಿ.

ಹಂತ 5: ಈಗ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಕೇಸರಿ ದಳಗಳನ್ನು ಸೇರಿಸಿ ಮಿಶ್ರಣ ಮಾಡಿ.

ಇಷ್ಟಾದರೆ ಮೈಸೂರ್ ಪಾಕ್ ರುಚಿ ನೀಡುವ ಸ್ಪೆಷಲ್ ಕ್ಯಾರೆಟ್ ಪಾಯಸ ಸವಿಯಲು ಸಿದ್ಧ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಸೇರಿಸಿ ಬಿಸಿಬಿಸಿಯಾಗಿ ಅಥವಾ ತಣ್ಣಗಾಗಿಸಿ ಸವಿಯಬಹುದು.

ಈ ದೀಪಾವಳಿಗೆ ಸಾಂಪ್ರದಾಯಿಕ ಸಿಹಿ ತಿನಿಸುಗಳ ಜೊತೆಗೆ ಹೊಸ ರುಚಿಯ ಕ್ಯಾರೆಟ್ ಪಾಯಸವನ್ನೂ ಮನೆಯವರಿಗೆ ಉಣಬಡಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker