
ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ ವ್ಯಕ್ತಿಯೊಬ್ಬರಿಗೆ ಶಾಕ್ ಎದುರಾಗಿದೆ. ಮನೆಗೆ ಬಂದ ವ್ಯಕ್ತಿ ಮತ್ತೊಬ್ಬರೊಂದಿಗೆ ಸೇರಿಕೊಂಡು ಚಾಕು ತೋರಿಸಿ ಬೆದರಿಸಿ ಬರೋಬ್ಬರಿ 226 ಗ್ರಾಂ ಚಿನ್ನಾಭರಣ ದೋಚಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ನಾಗರಭಾವಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಂಗಳಮುಖಿಯರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಹಿತ್ ಎಂಬುವವರು ನಾಗರಭಾವಿಯ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅಕ್ಟೋಬರ್ 21ರಂದು ಅವರ ಪತ್ನಿ ತಮಿಳುನಾಡಿಗೆ ತೆರಳಿದ್ದರು. ಮರುದಿನ ರೋಹಿತ್ ಅವರು ಹೆಸರಘಟ್ಟದಲ್ಲಿರುವ ತಮ್ಮ ಸ್ವಂತ ಮನೆಗೆ ಹೋಗುವ ಸಂದರ್ಭದಲ್ಲಿ, ಒಂದು ದಿನ ಉಳಿದುಕೊಳ್ಳಲು ಬಂದಿದ್ದ ಸ್ನೇಹಿತ ತಿಲಕ್‌ಗೆ ಮನೆಯ ಕೀ ನೀಡಿದ್ದರು.
ಅಂದು ರಾತ್ರಿ ತಿಲಕ್ ಅವರು ಗ್ರೈಂಡರ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬರನ್ನು ರೋಹಿತ್ ಅವರ ಮನೆಗೆ ಆಹ್ವಾನಿಸಿದ್ದರು. ರಾತ್ರಿ ಸುಮಾರು 10.15ರ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ವ್ಯಕ್ತಿ, ಬಳಿಕ ಮಾಸ್ಕ್ ತೆಗೆದಾಗ ಮಂಗಳಮುಖಿ ಎಂಬುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಾಕು ತೋರಿಸಿ ಬೆದರಿಕೆ, ಮತ್ತೊಬ್ಬರ ಎಂಟ್ರಿ!
ಮನೆಗೆ ಬಂದ ವ್ಯಕ್ತಿ ಸ್ವಲ್ಪ ಸಮಯ ತಿಲಕ್ ಅವರೊಂದಿಗೆ ಮಾತನಾಡಿದ ಬಳಿಕ ನೇರವಾಗಿ ಮಲಗುವ ಕೋಣೆಗೆ ತೆರಳಿ ಕಪಾಟುಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ತಿಲಕ್‌ಗೆ ಸದ್ದು ಮಾಡದಂತೆ ಬೆದರಿಕೆ ಹಾಕಿ ಮತ್ತೊಬ್ಬರಿಗೆ ಕರೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಮಂಗಳಮುಖಿ ಮನೆಗೆ ಬಂದಿದ್ದು, ಇಬ್ಬರೂ ಸೇರಿ ತಿಲಕ್ ಅವರನ್ನು ಹಾಲ್‌ನಲ್ಲಿ ಕೂರಿಸಿ ಚಾಕು ತೋರಿಸಿ ಬೆದರಿಸಿದ್ದಾರೆ ಎನ್ನಲಾಗಿದೆ. ಒಬ್ಬರು ಚಾಕು ಹಿಡಿದು ಕಾವಲು ನಿಂತಿದ್ದರೆ, ಮತ್ತೊಬ್ಬರು ಮಲಗುವ ಕೋಣೆಯ ಕಪಾಟು ಒಡೆದು ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ತಿಲಕ್ ಅವರನ್ನು ತಳ್ಳಿ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಆತಂಕಗೊಂಡ ತಿಲಕ್ ತಡರಾತ್ರಿ ಮನೆ ಮಾಲೀಕ ರೋಹಿತ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
226 ಗ್ರಾಂ ಚಿನ್ನಾಭರಣ ಮಾಯ!
ಮಾಹಿತಿ ತಿಳಿಯುತ್ತಿದ್ದಂತೆ ಮನೆಗೆ ಬಂದ ರೋಹಿತ್ ಅವರು ಕಪಾಟು ಪರಿಶೀಲಿಸಿದಾಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಮಾಂಗಲ್ಯ ಸರ, ನೆಕ್ಲೇಸ್, ಚಿನ್ನದ ಬಳೆಗಳು, ಮೂರು ಚಿನ್ನದ ಸರಗಳು, ಬ್ರೇಸ್ಲೆಟ್, ಐದು ಉಂಗುರಗಳು ಹಾಗೂ ಮೂರು ಜೊತೆ ಓಲೆಗಳು ಸೇರಿದಂತೆ ಒಟ್ಟು 226 ಗ್ರಾಂ ಚಿನ್ನಾಭರಣ ಕಳವಾಗಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.
ಚಂದ್ರಾಲೇಔಟ್ ಪೊಲೀಸರಿಂದ ತನಿಖೆ
ಘಟನೆ ಸಂಬಂಧ ರೋಹಿತ್ ನೀಡಿದ ದೂರಿನ ಆಧಾರದ ಮೇಲೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 309ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮೊಬೈಲ್ ಕರೆಗಳ ವಿವರಗಳನ್ನೂ ಕಲೆಹಾಕಲಾಗುತ್ತಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಗಳ ಗುರುತು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.
ಒಟ್ಟಿನಲ್ಲಿ, ಸ್ನೇಹಿತನ ಮೇಲಿನ ನಂಬಿಕೆಯಿಂದ ಮನೆಯ ಕೀ ನೀಡಿದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ಆತಂಕ ಮೂಡಿಸಿದೆ. ಆರೋಪಿಗಳ ಬಂಧನದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.




One Comment