ಬಾಡಿಗೆ ಹಣ ಎಣಿಸುತ್ತಿದ್ದ ವಕೀಲನ ಮೇಲೆ ಫೈರಿಂಗ್: ಕೊಲೆಗೆ ಸ್ಕೆಚ್ ಹಾಕಿದ್ರಾ ದುಷ್ಕರ್ಮಿಗಳು?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ವಕೀಲ ಮಂಜುನಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಗರದ ವೈಟ್‌ಫೀಲ್ಡ್ ಸಮೀಪದ ಪಟ್ಟಂದೂರು ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ನೀಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಗಮನ ಬೇರೆಡೆ ಸೆಳೆದಿದ್ದು, ಇದೇ ವೇಳೆ ಹಿಂದಿನಿಂದ ಬಂದ ಮತ್ತೊಬ್ಬ ದುಷ್ಕರ್ಮಿ ಮಂಜುನಾಥ್ ಅವರ ಹಣೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೃತ ವಕೀಲ ಮಂಜುನಾಥ್ ಅವರ ಸಂಬಂಧಿ ಅಕ್ಷಯ್ ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಬಾಡಿಗೆ ಹಣ ನೀಡಲು ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದಿದ್ದ. ಮಂಜುನಾಥ್ ಅವರು ಬಾಡಿಗೆ ಹಣವನ್ನು ಎಣಿಸುತ್ತಿದ್ದ ಸಂದರ್ಭದಲ್ಲಿ, ಆ ವ್ಯಕ್ತಿ ಅವರ ಗಮನವನ್ನು ಬೇರೆಡೆ ಸೆಳೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ಹಿಂದಿನಿಂದ ಬಂದ ಮತ್ತೊಬ್ಬ ವ್ಯಕ್ತಿ ಮಂಜುನಾಥ್ ಅವರ ತಲೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಕ್ಷಯ್ ತಿಳಿಸಿದ್ದಾರೆ. ಏಕಾಏಕಿ ನಡೆದ ಈ ದಾಳಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ತಕ್ಷಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಮೆದುಳು ನಿಷ್ಕ್ರಿಯಗೊಂಡಿರುವುದು ದೃಢಪಟ್ಟಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಘಟನೆ ಕೇವಲ ಬಾಡಿಗೆ ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲ ಎಂದು ಮಂಜುನಾಥ್ ಅವರ ಸಂಬಂಧಿ ಅಕ್ಷಯ್ ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಡಿಗೆ ನೀಡಲು ಬಂದ ವ್ಯಕ್ತಿಯ ಬಳಿ ಬಂದೂಕು ಹೇಗೆ ಇತ್ತು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಬಾಡಿಗೆದಾರರ ಮೂಲಕ ಗಮನ ಬೇರೆಡೆ ಸೆಳೆದು, ಪೂರ್ವಯೋಜಿತವಾಗಿ ಈ ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ಅಕ್ಷಯ್ ಆರೋಪಿಸಿದ್ದಾರೆ. ಆದರೆ, ಕೊಲೆಯ ಹಿಂದಿನ ನಿಜವಾದ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಮೃತ ಮಂಜುನಾಥ್ ವೃತ್ತಿಯಲ್ಲಿ ವಕೀಲರಾಗಿದ್ದರು. ಅವರು ರಿಯಲ್ ಎಸ್ಟೇಟ್ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ ಎಂದು ಅಕ್ಷಯ್ ತಿಳಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ, ಆರೋಪಿಗಳ ಗುರುತು ಹಾಗೂ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಬೆಂಗಳೂರಿನಲ್ಲಿ ನಡೆದ ಈ ಭೀಕರ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಿ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.




2 Comments