ಮೃತದೇಹಗಳ ನಡುವೆ ಮದ್ಯಪಾನ: ವೈರಲ್ ವಿಡಿಯೋ ಬೆನ್ನಲ್ಲೇ ವೈದ್ಯ ಅಮಾನತು!

ಮುಂಬೈ, ಅಕ್ಟೋಬರ್ 17: ಆಸ್ಪತ್ರೆಯ ಶವಾಗಾರದಲ್ಲೇ ವೈದ್ಯರೊಬ್ಬರು ಮದ್ಯಪಾನ ಮಾಡಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡದಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಯ (ವೈಸಿಎಂ) ಶವಾಗಾರದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರನ್ನು ತಕ್ಷಣವೇ ಅಮಾನತುಗೊಳಿಸಿದೆ.ಗುರುವಾರ ರಾತ್ರಿ ಪಿಂಪ್ರಿ-ಚಿಂಚ್ವಾಡ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ ವೈಸಿಎಂ ಆಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ ಹಾಗೂ ಶವವನ್ನು ಪಡೆದುಕೊಳ್ಳಲು ಕುಟುಂಬಸ್ಥರು ಆಸ್ಪತ್ರೆಯ ಹೊರಗೆ ರಾತ್ರಿಯಿಡೀ ಕಾಯುತ್ತಿದ್ದರು. ಇದೇ ವೇಳೆ ಶವಾಗಾರದ ಒಳಭಾಗದಲ್ಲಿ ವೈದ್ಯರೊಬ್ಬರು ಮೇಜಿನ ಮೇಲೆ ಮದ್ಯದ ಬಾಟಲಿಗಳು ಹಾಗೂ ತಿಂಡಿ-ತಿನಿಸುಗಳನ್ನು ಇಟ್ಟುಕೊಂಡು ಮದ್ಯಪಾನ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ವೈದ್ಯನ ವಿರುದ್ಧ ಕ್ರಮಶವಾಗಾರದಂತಹ ಸೂಕ್ಷ್ಮ ಸ್ಥಳದಲ್ಲಿ ವೈದ್ಯರು ಮದ್ಯಪಾನ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ವಿಡಿಯೋದಲ್ಲಿನ ಘಟನೆಗೆ ಸಂಬಂಧಿಸಿದಂತೆ ವೈದ್ಯ ಡಾ. ವೈಭವ್ ಅವಿನಾಶ್ ಮಹಾಸ್ಕೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
https://www.facebook.com/reel/1402612215290041
ಶವಕ್ಕಾಗಿ ಕಾಯುತ್ತಿದ್ದ ಕುಟುಂಬಸ್ಥರುಒಂದೆಡೆ ಮೃತರ ಕುಟುಂಬಸ್ಥರು ತಮ್ಮವರ ಶವವನ್ನು ಪಡೆದುಕೊಳ್ಳಲು ಹಾಗೂ ಅಗತ್ಯ ದಾಖಲೆಗಳಿಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಶವಾಗಾರದೊಳಗೆ ವೈದ್ಯರು ಮದ್ಯಪಾನ ಮಾಡುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಂತಹ ಜವಾಬ್ದಾರಿಯುತ ಸ್ಥಳಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ರೀತಿಯ ಬಗ್ಗೆ ಈ ಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಸದ್ಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ವೈದ್ಯರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮುಂದಿನ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.



