ಭಾನುವಾರವಾದರೂ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಕಡ್ಡಾಯ: ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ಈ ಬಾರಿ ನವೆಂಬರ್ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಇರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಗೌರವಪೂರ್ವಕವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳು, ನಾಡಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಹಾಗೂ ಇತರ ಪ್ರಮುಖ ಜಯಂತಿಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಿಯಮಾನುಸಾರ ಆಚರಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ, ಈ ಬಾರಿ ಭಾನುವಾರದಂದು ಕನ್ನಡ ರಾಜ್ಯೋತ್ಸವ ಬಂದಿದ್ದರೂ ಆಚರಣೆಗೆ ವಿನಾಯಿತಿ ಇರುವುದಿಲ್ಲ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಶಾಲೆಗಳಲ್ಲಿ ರಾಜ್ಯೋತ್ಸವ ಆಚರಣೆಗೆ ಸೂಚಿಸಲಾಗಿದೆ. ಹೀಗಾಗಿ, ರಜಾದಿನವಾದ ಭಾನುವಾರವೇ ಶಾಲೆಗಳಲ್ಲಿ ಕನ್ನಡದ ಹಬ್ಬವನ್ನು ಆಚರಿಸುವುದು ಕಡ್ಡಾಯವಾಗಿದ್ದು, ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ಇಲಾಖೆಯ ಆದೇಶವನ್ನು ಪಾಲಿಸಬೇಕಾಗಿದೆ.



