ರಾಜ್ಯ

‘ಐ ಲವ್ ಯೂ ಚಿನ್ನು’ ಮೆಸೇಜ್ ಕಿರುಕುಳ: ವಿದ್ಯಾರ್ಥಿನಿಯರಿಂದ ಉಪನ್ಯಾಸಕನಿಗೆ ಗೂಸಾ!

ವಿದ್ಯಾರ್ಥಿನಿಯರಿಗೆ ಲವ್ ಮೆಸೇಜ್ ಕಳುಹಿಸಿದ ಉಪನ್ಯಾಸಕ: ನಾಗಮಂಗಲ ಕಾಲೇಜಿನಲ್ಲಿ ಹೈಡ್ರಾಮಾ

ಮಂಡ್ಯ, ಅಕ್ಟೋಬರ್ 30: ವಿದ್ಯಾರ್ಥಿನಿಯರಿಗೆ ‘ಐ ಲವ್ ಯೂ ಚಿನ್ನು’, ‘ಐ ಲೈಕ್ ಯೂ’ ಎಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರೇ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿದ್ದ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿ ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಥಳಿಸಿರುವುದಾಗಿ ವರದಿಯಾಗಿದೆ.

ನಡೆದಿದ್ದೇನು?

ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ ಎಂಬಾತ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಚಾಟಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ‘ಐ ಲವ್ ಯೂ’, ‘ಐ ಲೈಕ್ ಯೂ’, ‘ಐ ಲವ್ ಯೂ ಚಿನ್ನು’ ಎಂಬ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಉಪನ್ಯಾಸಕನ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಫೀಸ್ ರೂಮ್‌ಗೆ ನುಗ್ಗಿ ತರಾಟೆ

ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ನೇರವಾಗಿ ಆತನ ಕಚೇರಿ ಕೊಠಡಿಗೆ ತೆರಳಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ವಿದ್ಯಾರ್ಥಿನಿಯರು ಉಪನ್ಯಾಸಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿದ್ದಾಗ ಉಪನ್ಯಾಸಕ ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯರು ಆತನನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆಯ ವೇಳೆ ಉಪನ್ಯಾಸಕ ಭಯಗೊಂಡು ಬೀರು ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಡಿಯೋ ಇದೀಗ ಗಮನ ಸೆಳೆದಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker