
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಎಸ್ಐಟಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೂತನ ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ನೇಮಿಸಲಾಗಿದೆ.
ಎಸ್ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಶಶಿಕುಮಾರ್ ಹಾಗೂ ವೆಂಕಟೇಶ್ ಪ್ರಸನ್ನ ಅವರು ತಮ್ಮನ್ನು ತಂಡದ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿದ ಸರ್ಕಾರ, ಇಬ್ಬರನ್ನೂ ತಂಡದಿಂದ ಕೈಬಿಟ್ಟು ಹೊಸ ನೇಮಕಾತಿ ಮಾಡಿದೆ.
ಇನ್ನು ಪ್ರಕರಣದ ಮರುತನಿಖೆಯ ಭಾಗವಾಗಿ ಎಸ್ಐಟಿ ತನ್ನ ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಪ್ರಕರಣದ ಅಂದಿನ ತನಿಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಬ್ಇನ್ಸ್ಪೆಕ್ಟರ್, ಎಎಸ್ಐ, ಪೊಲೀಸ್ ಕಾನ್ಸ್ಟೆಬಲ್, ಹೆಡ್ಕಾನ್ಸ್ಟೆಬಲ್ ಸೇರಿದಂತೆ ಸುಮಾರು ಎಂಟು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಫಾರೆನ್ಸಿಕ್ ತಜ್ಞರು ಹಾಗೂ ವೈದ್ಯರನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ದಾಖಲೆಗಳು ಮತ್ತು ತನಿಖೆಯ ವಿವಿಧ ಆಯಾಮಗಳನ್ನು ಮರುಪರಿಶೀಲಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಪ್ರಕರಣದ ಮರುತನಿಖೆ ಪೂರ್ಣಗೊಳಿಸಲು ಇನ್ನು ಸುಮಾರು 50ರಿಂದ 60 ದಿನಗಳ ಕಾಲಾವಕಾಶ ಮಾತ್ರ ಉಳಿದಿದೆ ಎನ್ನಲಾಗುತ್ತಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸುವ ಸವಾಲು ಎಸ್ಐಟಿ ಮುಂದಿದೆ. ಹೊಸ ಮುಖ್ಯಸ್ಥರ ನೇಮಕ ಮತ್ತು ಪೊಲೀಸ್ ಸಿಬ್ಬಂದಿಯ ವಿಚಾರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.



