ಬೀಡಿ ಸೇದಲು ಬೆಂಕಿಪೊಟ್ಟಣ ಗೀರಿದ್ದೇ ದುರಂತಕ್ಕೆ ಕಾರಣವಾಯ್ತಾ?

ಬೆಂಗಳೂರು, ಅಕ್ಟೋಬರ್ 19: ಬೆಂಗಳೂರು ಹೊರವಲಯದ ಆನೇಕಲ್ನ ಶ್ರೀಸಾಯಿ ಲೇಔಟ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಕಟ್ಟಡ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್ನ ಶ್ರೀಸಾಯಿ ಲೇಔಟ್ನಲ್ಲಿ ಮಂಜುನಾಥ್ ಎಂಬುವರಿಗೆ ಸೇರಿದ ಮನೆಯಲ್ಲಿ ಉತ್ತರ ಭಾರತದ ಕಟ್ಟಡ ಕಾರ್ಮಿಕರು ಬಾಡಿಗೆಗೆ ವಾಸವಿದ್ದರು. ರಾತ್ರಿ ಅಡುಗೆ ಮಾಡಿದ ಬಳಿಕ ಗ್ಯಾಸ್ ಸ್ಟವ್ ಸ್ವಿಚ್ ಆಫ್ ಮಾಡದೆ ಬಿಟ್ಟಿದ್ದರಿಂದ ಗ್ಯಾಸ್ ಸೋರಿಕೆಯಾಗಿದೆ ಎನ್ನಲಾಗಿದೆ.
ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಂಡು ಕಾರ್ಮಿಕರು ನಿದ್ರೆಗೆ ಜಾರಿದ್ದರು. ಈ ವೇಳೆ ರಾತ್ರಿಯಿಡೀ ಸೋರಿಕೆಯಾದ ಗ್ಯಾಸ್ ಮನೆಯೊಳಗೆ ಹರಡಿಕೊಂಡಿತ್ತು. ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಬೀಡಿ ಸೇದಲು ಬೆಂಕಿಪೊಟ್ಟಣ ಗೀರಿದಾಗ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.
ಸ್ಫೋಟದಲ್ಲಿ ಮಧ್ಯಪ್ರದೇಶದ ಧೀರು, ವಿಜಯ್, ಕೋಬಿನ್ ಹಾಗೂ ಪಶ್ಚಿಮ ಬಂಗಾಳದ ಸಂಜಯ್, ಬೋರೋ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಸ್ಫೋಟದ ತೀವ್ರತೆಗೆ ಮನೆಯ ಸಿಮೆಂಟ್ ಶೀಟ್ಗಳು ಛಿದ್ರಗೊಂಡಿದ್ದು, ಒಳಗಿದ್ದ ಬಟ್ಟೆಬರೆ ಹಾಗೂ ಇತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಸ್ಫೋಟ ಸಂಭವಿಸಿದ ಬಳಿಕ ಗಾಯಗೊಂಡ ಕಾರ್ಮಿಕರು ಕತ್ತಲೆಯಲ್ಲೇ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅವರ ಕೂಗಾಟ ಕೇಳಿದ ನೆರೆಹೊರೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣೆಗೆ ಮುಂದಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾಸ್ ಸೋರಿಕೆ ಹಾಗೂ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



