
ಕೋಲಾರ: ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. “ಮೀಡಿಯಾ ಜೊತೆ ನಾನು ಏನೂ ಮಾತನಾಡುವುದಿಲ್ಲ” ಎಂದು ಹೇಳುವ ಮೂಲಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಕೋಲಾರದಲ್ಲಿ ನಡೆದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ರಾಜ್ಯದ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರಶ್ನಿಸಿದಾಗ, ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ದೇವರಾಜ ಅರಸು ಉನ್ನತ ಶಿಕ್ಷಣ ಸಂಸ್ಥೆ ಹಾಗೂ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಆರ್.ಎಲ್. ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಸ್ಥಾಪಕ ಟ್ರಸ್ಟಿಗಳಲ್ಲಿ ತಾವೂ ಒಬ್ಬರಾಗಿದ್ದೆ ಎಂದು ನೆನಪಿಸಿಕೊಂಡರು.
ಆದರೆ, ತಾವು ಒಮ್ಮೆಯೂ ಸಭೆಗೆ ಹಾಜರಾಗಿರಲಿಲ್ಲ. ಹೀಗಾಗಿ ಫೋನ್ ಮಾಡಿ ಟ್ರಸ್ಟಿ ಸ್ಥಾನದಿಂದ ತೆಗೆದುಹಾಕುವುದಾಗಿ ಹೇಳಿದ್ದರು. ಅದರಂತೆ ಈಗ ತಾವು ಟ್ರಸ್ಟಿ ಅಲ್ಲ ಎಂದು ತಿಳಿಸಿದರು.
ಜಿ.ಎಚ್. ನಾಗರಾಜ್ ತಮ್ಮ ಮಗನನ್ನೂ ಟ್ರಸ್ಟಿಯನ್ನಾಗಿ ಮಾಡಿದ್ದಾರೆ. ಆದರೆ, ಆತ ಕೂಡ ಸಭೆಗಳಿಗೆ ಬರುತ್ತಿಲ್ಲ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು.
ಕಾರ್ಯಕ್ರಮದಲ್ಲಿ ತಮಗೆ ಗೌರವ ಡಾಕ್ಟರೇಟ್ ನೀಡಿರುವ ವಿಚಾರವನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಡೀಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡುತ್ತಿರುವ ವಿಷಯವೇ ತಮಗೆ ತಿಳಿದಿರಲಿಲ್ಲ. ಬೇಡ ಎಂದಿದ್ದರೂ ಗೌರವ ಡಾಕ್ಟರೇಟ್ ನೀಡಲಾಗಿದೆ ಎಂದು ಹೇಳಿದರು.
ತಾವು ರಾಜ್ಯದಲ್ಲಿ 17 ಬಜೆಟ್ ಮಂಡಿಸಿದ್ದು, ಎಂಟು ವರ್ಷ ಮುಖ್ಯಮಂತ್ರಿಯಾಗಿದ್ದೇನೆ. ಬಹುಶಃ ಈ ಕಾರಣಕ್ಕೆ ಗೌರವ ಡಾಕ್ಟರೇಟ್ ನೀಡಿರಬಹುದು ಎಂದು ಹಾಸ್ಯಭರಿತವಾಗಿ ಮಾತನಾಡಿದರು.
“ನಾನು ಡಾಕ್ಟರ್ ಅಲ್ಲ, ಲಾಯರ್ ಅಷ್ಟೇ. ಇನ್ಮುಂದೆ ನನ್ನನ್ನು ಡಾಕ್ಟರ್ ಸಿದ್ದರಾಮಯ್ಯ ಎಂದು ಕರೆಯಬೇಡಿ, ಸಿದ್ದರಾಮಯ್ಯ ಎಂದೇ ಕರೆಯಿರಿ” ಎಂದು ಹೇಳುವ ಮೂಲಕ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಸಿದ್ದರಾಮಯ್ಯ, 1983ರಲ್ಲಿ ತಾವು ಮೊದಲ ಬಾರಿಗೆ ಶಾಸಕರಾದ ಸಂದರ್ಭವನ್ನು ನೆನಪಿಸಿಕೊಂಡರು. ಜಾಲಪ್ಪ ಅವರು ಅದಕ್ಕೂ ಮೊದಲು ವಿಧಾನ ಪರಿಷತ್ ಸದಸ್ಯರಾಗಿದ್ದರು ಎಂದು ತಿಳಿಸಿದರು.
1994ರಲ್ಲಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾದಾಗ ತಾವು ಮತ್ತು ಜಾಲಪ್ಪ ಇಬ್ಬರೂ ಸಚಿವರಾಗಿದ್ದೆವು. ಜಾಲಪ್ಪ ಅವರು ಕಂದಾಯ ಖಾತೆ ಕೇಳಿಕೊಂಡಿದ್ದರು; ತಮಗೆ ಹಣಕಾಸು ಖಾತೆ ದೊರಕಿತ್ತು ಎಂದು ಹೇಳಿದರು.
ತಾವು ಮುಖ್ಯಮಂತ್ರಿಯಾಗಬೇಕು ಎಂದು ಮೊದಲು ಹೇಳಿದವರು ಜಾಲಪ್ಪ ಅವರೇ ಎಂದು ಸಿದ್ದರಾಮಯ್ಯ ಸ್ಮರಿಸಿದರು. ತಾವು ಸಿಎಂ ಆದರೆ ಜಾಲಪ್ಪ ಅವರೇ ಮುಖ್ಯಮಂತ್ರಿಯಾದಷ್ಟು ಸಂತೋಷವಾಗುತ್ತದೆ ಎಂದು ಅವರು ಹೇಳುತ್ತಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಜಾಲಪ್ಪ ಅವರು ಹಲವು ರೀತಿಯಲ್ಲಿ ಸಹಾಯ ಮಾಡಿದ್ದರು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
ಕೋಲಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು ಗಮನ ಸೆಳೆದಿದ್ದು, ವಿಶೇಷವಾಗಿ ಗೌರವ ಡಾಕ್ಟರೇಟ್ ಕುರಿತು ಅವರು ಮಾಡಿದ ಹಾಸ್ಯಭರಿತ ಹೇಳಿಕೆಗಳು ಸಭಿಕರಲ್ಲಿ ನಗೆ ಮೂಡಿಸಿದವು.



