ಬಸ್ ನಿಲ್ದಾಣದಲ್ಲೇ ಕೈಚಳಕ..! ಸರಣಿ ಕಳ್ಳತನ ನಡೆಸುತ್ತಿದ್ದ ಮಹಿಳೆ ಅರೆಸ್ಟ್; ₹9 ಲಕ್ಷ ಮೌಲ್ಯದ ಚಿನ್ನಾಭರಣ ವಶ.

ಶಿರಸಿ: ಜನಜಂಗುಳಿಯನ್ನೇ ಅಸ್ತ್ರವಾಗಿಸಿಕೊಂಡು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದು, ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿ ₹9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 3ರಂದು ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಜ್ಯೋತಿ @ ಸಂಜನಾ (32) ಎಂಬ ಆರೋಪಿಯನ್ನು ಜೂನ್ 25ರಂದು ಬಂಧಿಸಲಾಯಿತು.
ಪ್ರಕರಣದ ಪ್ರಕಾರ, ಸೊರಬ ತಾಲೂಕಿನ ಕಲಗೋಡ ಗ್ರಾಮದ ಸವಿತಾ ಆನಂದ ನಾಯ್ಕ್ ಅವರು ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ, ತಮ್ಮ ಅಕ್ಕನನ್ನು ಬಸ್ಗೆ ಹತ್ತಿಸುವ ಸಂದರ್ಭದ ಜನಜಂಗುಳಿಯನ್ನು ದುರುಪಯೋಗಪಡಿಸಿಕೊಂಡ ಆರೋಪಿತೆ, ಅವರ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆಯುವ ಮೂಲಕ 30 ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ₹8 ಸಾವಿರ ನಗದು ಸೇರಿ ಒಟ್ಟು ₹1.59 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಳು.
ಬಂಧಿತೆಯ ವಿಚಾರಣೆ ವೇಳೆ, 2025ರ ಸೆಪ್ಟೆಂಬರ್ 24ರಂದು ಇದೇ ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲೂ ತಾನೇ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ. ಇದರ ಆಧಾರದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ರಚಿಸಲಾದ ವಿಶೇಷ ತನಿಖಾ ತಂಡವು ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣವನ್ನು ಶೀಘ್ರವಾಗಿ ಭೇದಿಸಿ, ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಂಡ ಶಿರಸಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.



