ಕ್ರೈಮ್

ಅಪರಾಧಿ ಪತ್ತೆ ಮಾಡಿತ್ತು ಒಂದು ಕೂದಲು!

ಅಪರಾಧಿ ಎಷ್ಟೇ ಜಾಣನಾಗಿದ್ದರೂ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ತುಮಕೂರಿನಲ್ಲಿ ಒಂದು ಅತ್ಯಂತ ರೋಚಕ ಉದಾಹರಣೆ ಸಿಕ್ಕಿದೆ. ಇಲ್ಲೊಬ್ಬ ಹಂತಕ ತಾನು ಮಾಡಿದ ಕೊ*ಲೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದ. ಆದರೆ, ಮೃತದೇಹದ ಕೈಯಲ್ಲಿದ್ದ ಕೇವಲ ಒಂದೇ ಒಂದು ತಲೆಗೂದಲು ಈ ಇಡೀ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಟ್ಟಿದೆ.
ಅದು 2021ರ ಸಮಯ. #ತುಮಕೂರಿನ ಪ್ರಸಿದ್ಧ ಅಮಾನಿಕೆರೆಯ ಫುಟ್‌ಪಾತ್ ಮೇಲೆ ಮಂಜುನಾಥ್ ಎಂಬಾತನ ರಕ್ತಸಿಕ್ತ ಶ*ವ ಪತ್ತೆಯಾಗಿತ್ತು. ಮದ್ಯದ ನಶೆಯಲ್ಲಿ ಮಂಜುನಾಥನನ್ನು ಅತ್ಯಂತ ಕ್ರೂ*ರವಾಗಿ ಕೊಲೆ ಮಾಡಿ, ಹಂತಕ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕಿದ್ದು ಕೇವಲ ಒಂದು ರಕ್ತಸಿಕ್ತ ಶರ್ಟ್ ಪೀಸ್ ಮತ್ತು ಮೃತನ ಕೈ ಬೆರಳುಗಳ ಮಧ್ಯೆ ಸಿಲುಕಿಕೊಂಡಿದ್ದ ಕೇವಲ ಒಂದೇ ಒಂದು ತಲೆಗೂದಲು! ಕೊಲೆಗಾರನ ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಶಿವಕುಮಾರ್ ಅಲಿಯಾಸ್ ಮಾಲಾಶ್ರೀ ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿತ್ತು. ಈ ವೇಳೆ ಪೊಲೀಸರು ವಿಜ್ಞಾನದ ಮೊರೆ ಹೋದರು. ಮೃತನ ಕೈಯಲ್ಲಿದ್ದ ಆ ಒಂದು ತಲೆಗೂದಲು ಹಾಗೂ ಶಂಕಿತ ಆರೋಪಿ ಶಿವಕುಮಾರನ ತಲೆಗೂದಲನ್ನು ಹೈಟೆಕ್ ಡಿಎನ್‌ಎ (DNA) ಪರೀಕ್ಷೆಗೆ ರವಾನಿಸಲಾಯಿತು. ವಿಜ್ಞಾನ ಸುಳ್ಳು ಹೇಳುವುದಿಲ್ಲ ಎಂಬಂತೆ, ಲ್ಯಾಬ್ ರಿಪೋರ್ಟ್‌ನಲ್ಲಿ ಎರಡೂ ತಲೆಗೂದಲಿನ ಡಿಎನ್‌ಎ ಮ್ಯಾಚ್ ಆಗಿತ್ತು! ಮಂಜುನಾಥ್ ಸಾಯುವ ಮುನ್ನ ಹಂತಕನ ಜೊತೆ ಹೋರಾಡಿದ್ದ, ಆ ವೇಳೆ ಹಂತಕನ ತಲೆಗೂದಲು ಆತನ ಕೈಗೆ ಸಿಕ್ಕಿತ್ತು ಎಂಬುದು ಸಾಬೀತಾಯಿತು.


ಕೇವಲ ತಲೆಗೂದಲಿನ ಆಧಾರದ ಮೇಲೆ ನಡೆದ ಈ ರೋಚಕ ಪ್ರಕರಣದ ಸುದೀರ್ಘ ವಿಚಾರಣೆ ತುಮಕೂರು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಮೃತನ ಪರವಾಗಿ ಸರ್ಕಾರಿ ಅಭಿಯೋಜಕಿ ಕವಿತಾ ಅವರು ಭದ್ರವಾದ ಕಾನೂನು ಹೋರಾಟ ನಡೆಸಿ, ಡಿಎನ್‌ಎ ವರದಿಯ ಮಹತ್ವವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ನರಸಮ್ಮ ಅವರು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಆರೋಪಿ ಶಿವಕುಮಾರ್ ಅಲಿಯಾಸ್ ಮಾಲಾಶ್ರೀಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದು, ಕೊಲೆಯಾದ ಮಂಜುನಾಥನ ವೃದ್ಧ ತಾಯಿಗೆ ಸೂಕ್ತ ಪರಿಹಾರದ ಮೊತ್ತ ನೀಡುವಂತೆ ಆದೇಶ ನೀಡಿದೆ.
ಒಟ್ಟಿನಲ್ಲಿ, ಅಪರಾಧ ಮಾಡಿ ನೂರು ದಿನ ಅಡಗಿರಬಹುದು, ಆದರೆ ಒಂದಲ್ಲಾ ಒಂದು ದಿನ ಸಿಕ್ಕಿಬೀಳಲೇಬೇಕು ಎಂಬ ನಾಣ್ಣುಡಿ ಈ ಕೇಸ್‌ನಲ್ಲಿ ಮತ್ತೊಮ್ಮೆ ನಿಜವಾಗಿದೆ. ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ ಮೃತನ ಆತ್ಮಕ್ಕೆ ಹಾಗೂ ಆತನ ತಾಯಿಗೆ ನ್ಯಾಯ ಸಿಕ್ಕಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker