ಆಂಧ್ರದ ಶಾಲೆಯೊಳಗೇ ರಕ್ತಪಾತ! 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಭೀಕರ ದಾಳಿ!
ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯಲ್ಲೇ ಕೊಲೆ ಯತ್ನ!

ಶಾಲೆ ಅಂದ್ರೆ ಮಕ್ಕಳಿಗೆ ವಿದ್ಯೆ ಕಲಿಯುವ ದೇಗುಲ. ಆದರೆ ಅದೇ ಶಾಲೆಯ ತರಗತಿ ಕೊಠಡಿಯೊಳಗೆ ಯುವಕನೊಬ್ಬ ರಕ್ತದ ಕೋಡಿ ಹರಿಸಿದ್ದಾನೆ. ಪ್ರೀತಿಸುವಂತೆ ಒತ್ತಾಯಿಸಿ, ನಿರಾಕರಿಸಿದ್ದಕ್ಕೆ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮರ ಕತ್ತರಿಸುವ ಯಂತ್ರದಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ತರಗತಿಯಲ್ಲಿ ಪಾಠ ನಡೆಯುತ್ತಿದ್ದ ವೇಳೆಯೇ ಆರೋಪಿ ಹೇಮಂತ್ ಏಕಾಏಕಿ ಮರ ಕತ್ತರಿಸುವ ಯಂತ್ರದೊಂದಿಗೆ ಶಾಲೆಯೊಳಗೆ ನುಗ್ಗಿದ್ದಾನೆ. ಬಳಿಕ ನೇರವಾಗಿ ವಿದ್ಯಾರ್ಥಿನಿಯ ಮೇಲೆ ದಾಳಿ ನಡೆಸಿದ್ದಾನೆ. ಆಕೆಯ ಮುಖ, ತಲೆ, ಕುತ್ತಿಗೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ದಾಳಿಯ ತೀವ್ರತೆಗೆ ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಕುಸಿದುಬಿದ್ದಿದ್ದಾಳೆ.
ಇನ್ನು ಈ ಭೀಕರ ಕೃತ್ಯವನ್ನು ಕಣ್ಣಾರೆ ಕಂಡ ಸಹಪಾಠಿಗಳು ಮತ್ತು ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ. ದಾಳಿಯನ್ನು ತಡೆಯಲು ಮುಂದಾದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ತಕ್ಷಣವೇ ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಹೇಮಂತ್ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆತನ ಪ್ರೀತಿಯ ಪ್ರಸ್ತಾಪವನ್ನು ನಿರಾಕರಿಸಿದ್ದ ವಿದ್ಯಾರ್ಥಿನಿ, ತನ್ನನ್ನು ದೂರವಿಡುವಂತೆ ಎಚ್ಚರಿಕೆ ನೀಡಿದ್ದಳು. ಅಲ್ಲದೆ, ಈ ವಿಚಾರವನ್ನು ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಶಾಲೆಯೊಳಗೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಧರ್ಮವೃಂದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿ ಸಂತ್ರಸ್ತೆಯ ದೂರದ ಸಂಬಂಧಿಯಾಗಿದ್ದು, ನಾಗಲೂರು ಮೂಲದವನು ಎಂದು ಗುರುತಿಸಲಾಗಿದೆ.
ಇನ್ನು ಈ ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಬಾಲಕಿಯ ಮೇಲೆ ಇಂತಹ ಬರ್ಬರ ದಾಳಿ ನಡೆಸಿದ ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಪೊಲೀಸರಿಗೆ ಆದೇಶಿಸಿದ್ದಾರೆ.
ಒಟ್ಟಿನಲ್ಲಿ, ವಿದ್ಯೆ ಕಲಿಯಬೇಕಾದ ವಯಸ್ಸಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಈ ಭೀಕರ ದಾಳಿ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಶಾಲೆಯೊಳಗೇ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.




One Comment