ಮಗನ 18ನೇ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ದರ್ಶನ್ ಗಿಫ್ಟ್!
ಅಪ್ಪ ಕೊಟ್ಟ ಕಿಟ್‌ಕ್ಯಾಟ್ ನೋಡಿ ಭಾವುಕನಾದ ವಿನೀಶ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಈ ಬಾರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಮಗ ವಿನೀಶ್ 18ನೇ ವಸಂತಕ್ಕೆ ಕಾಲಿಟ್ಟಿದ್ದರೂ, ಅಪ್ಪನ ಜೊತೆಗಿದ್ದು ಸಂಭ್ರಮಿಸುವ ಅವಕಾಶ ಸಿಕ್ಕಿಲ್ಲ. ಆದರೆ, ಜೈಲಿನಲ್ಲಿದ್ದರೂ ಮಗನ ಜನ್ಮದಿನವನ್ನು ಮರೆಯದ ದರ್ಶನ್, ಸಣ್ಣ ಉಡುಗೊರೆಯೊಂದನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, 18ನೇ ವರ್ಷದ ಹುಟ್ಟುಹಬ್ಬದ ದಿನ ತಂದೆ ದರ್ಶನ್ ಅವರನ್ನು ಭೇಟಿ ಮಾಡಲು ವಿನೀಶ್ ಜೈಲಿಗೆ ಆಗಮಿಸಿದ್ದರು. ಸಂಬಂಧಿ ಸುಹಾಸ್ ಕೂಡ ಅವರ ಜೊತೆಗಿದ್ದರು. ಬಹಳ ದಿನಗಳ ಬಳಿಕ ಮಗನನ್ನು ಕಂಡ ದರ್ಶನ್ ಭಾವುಕರಾಗಿ ಅಪ್ಪಿಕೊಂಡು ಆಶೀರ್ವದಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಗನಿಗೆ ಉಡುಗೊರೆ ನೀಡಲು ದೊಡ್ಡ ವಸ್ತುಗಳೇನೂ ದರ್ಶನ್ ಬಳಿ ಇರಲಿಲ್ಲ. ಜೈಲಿನಲ್ಲಿ ತಮಗೆ ಸಿಕ್ಕಿದ್ದ ಕಿಟ್‌ಕ್ಯಾಟ್ ಚಾಕೊಲೇಟ್ ಅನ್ನೇ ಮಗನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. ಅಪ್ಪನ ಈ ಪುಟ್ಟ ಉಡುಗೊರೆ ವಿನೀಶ್ ಪಾಲಿಗೆ ಅತ್ಯಂತ ಅಮೂಲ್ಯವಾಗಿದೆ.
ತಂದೆ ನೀಡಿದ ಗಿಫ್ಟ್‌ನಿಂದ ಭಾವುಕರಾದ ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ‘ಈ ಪ್ರಪಂಚದಲ್ಲಿ ನನ್ನ ಅಪ್ಪ ಕೊಟ್ಟ ಈ ಗಿಫ್ಟ್‌ಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ದುಬಾರಿ ಉಡುಗೊರೆಗಿಂತ ತಂದೆಯ ಪ್ರೀತಿ ಮತ್ತು ಆಶೀರ್ವಾದವೇ ದೊಡ್ಡದು ಎಂಬ ಸಂದೇಶ ಈ ಪೋಸ್ಟ್‌ನಲ್ಲಿ ವ್ಯಕ್ತವಾಗಿದೆ.
ಇದೇ ವೇಳೆ ಮಗನಿಗೆ ಕಿವಿಮಾತು ಹೇಳಿದ ದರ್ಶನ್, ಇನ್ಮುಂದೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಿನ್ನ ಬಗ್ಗೆ ಯಾವುದೇ ದೂರುಗಳು ಬರಬಾರದು ಎಂದು ಬುದ್ಧಿವಾದ ಹೇಳಿ ಶುಭ ಹಾರೈಸಿದ್ದಾರೆ ಎನ್ನಲಾಗಿದೆ.
ಒಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಜೈಲಿನಲ್ಲಿರುವ ದರ್ಶನ್, ಮತ್ತೊಂದೆಡೆ ಕುಟುಂಬದ ಸುತ್ತಲಿನ ಬೆಳವಣಿಗೆಗಳಿಂದಲೂ ಸುದ್ದಿಯಲ್ಲಿದ್ದಾರೆ. ಇದೀಗ ಮಗನ 18ನೇ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ನೀಡಿದ ಈ ಪುಟ್ಟ ಉಡುಗೊರೆ ಮತ್ತು ತಂದೆ-ಮಗನ ಭಾವುಕ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಟ್ಟಿನಲ್ಲಿ, ಅಪ್ಪನ ಕೈಯಿಂದ ಸಿಕ್ಕ ಒಂದು ಕಿಟ್‌ಕ್ಯಾಟ್ ಚಾಕೊಲೇಟ್ ಮಗ ವಿನೀಶ್ ಪಾಲಿಗೆ ಮರೆಯಲಾಗದ ಹುಟ್ಟುಹಬ್ಬದ ಉಡುಗೊರೆಯಾಗಿದೆ.




One Comment