ನವರಾತ್ರಿ ಸಂಭ್ರಮದಲ್ಲಿ ದುರಂತ: ನೂಡಲ್ಸ್ ತಿಂದ 12 ವರ್ಷದ ಬಾಲಕಿ ಸಾವು !

ಉತ್ತರ ಪ್ರದೇಶ : ನವರಾತ್ರಿ ಹಬ್ಬದ ಸಂಭ್ರಮದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬಕ್ಕೆ ವಿಧಿಯ ಕ್ರೂರ ಹೊಡೆತ ಬಿದ್ದಿದೆ. ಸಂತೋಷದಿಂದ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ 12 ವರ್ಷದ ಬಾಲಕಿ ಹಠಾತ್ತನೆ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ನಡೆದಿದೆ. ದೇವಸ್ಥಾನದ ಮೇಳದಲ್ಲಿ ನೂಡಲ್ಸ್ ತಿಂದ ಬಳಿಕ ಬಾಲಕಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಕುಟುಂಬಸ್ಥರನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ .
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಮಿರ್ಹಚಿ ಪಟ್ಟಣದ ನಿವಾಸಿ ಶರತ್ ಶ್ರೀವಾಸ್ತವ ಅವರ 12 ವರ್ಷದ ಮಗಳು ತನು ಮೃತಪಟ್ಟ ಬಾಲಕಿ. ನವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಶರತ್ ಶ್ರೀವಾಸ್ತವ ಅವರ ಕುಟುಂಬ ಕಾಸ್ಗಂಜ್‌ನಲ್ಲಿರುವ ಮಾತಾ ಚಾಮುಂಡಾ ದೇವಸ್ಥಾನಕ್ಕೆ ದರ್ಶನ ಪಡೆಯಲು ತೆರಳಿತ್ತು .
ದೇವರ ದರ್ಶನ ಮುಗಿಸಿದ ಬಳಿಕ ಕುಟುಂಬದ ಸದಸ್ಯರು ದೇವಸ್ಥಾನದ ಆವರಣದಲ್ಲಿ ನಡೆದ ಮೇಳದಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಐಸ್‌ಕ್ರೀಮ್, ಚೌಮಿನ್ ಸೇರಿದಂತೆ ವಿವಿಧ ತಿಂಡಿಗಳನ್ನು ಖರೀದಿಸಿದ್ದರು. ಕುಟುಂಬದವರೊಂದಿಗೆ ಇದ್ದ ತನು ಕೂಡ ಚೌಮಿನ್ ತಿಂದಿದ್ದಳು .
ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಚೌಮಿನ್ ತಿಂದ ಕೆಲವೇ ಸಮಯದ ಬಳಿಕ ತನುವಿನ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿದೆ . ಬಾಲಕಿಗೆ ಉಸಿರಾಡಲು ತೊಂದರೆಯಾಗಿದ್ದು, ಪರಿಸ್ಥಿತಿ ಗಂಭೀರವಾಗತೊಡಗಿದೆ ಎಂದು ವರದಿಯಾಗಿದೆ.
ಚೌಮಿನ್‌ನ ತುಂಡು ಉಸಿರಾಟದ ನಾಳದಲ್ಲಿ ಸಿಲುಕಿಕೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಗಳ ಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಆತಂಕಗೊಂಡ ಪೋಷಕರು ತಕ್ಷಣವೇ ಆಕೆಯನ್ನು ಕಾಸ್ಗಂಜ್‌ನ ಕಭಾವತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.
ಮಗಳ ಹಠಾತ್ ಸಾವಿನಿಂದ ತಂದೆ ಶರತ್ ಶ್ರೀವಾಸ್ತವ ಸೇರಿದಂತೆ ಕುಟುಂಬದ ಸದಸ್ಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನವರಾತ್ರಿ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬದಲ್ಲಿ ಕೆಲವೇ ಕ್ಷಣಗಳಲ್ಲಿ ದುಃಖದ ವಾತಾವರಣ ಆವರಿಸಿದೆ.
ತನು ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಂದೆ ಆಗಮಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳಿಗೆ ಆಹಾರ ನೀಡುವಾಗ ಎಚ್ಚರಿಕೆ ಅಗತ್ಯ
ಈ ಘಟನೆ ಮಕ್ಕಳಿಗೆ ಆಹಾರ ನೀಡುವಾಗ ಎಚ್ಚರಿಕೆ ವಹಿಸುವ ಅಗತ್ಯವನ್ನು ನೆನಪಿಸುತ್ತದೆ. ಆಹಾರ ಗಂಟಲಿನಲ್ಲಿ ಸಿಲುಕಿಕೊಂಡರೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದು ಮತ್ತು ತುರ್ತು ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ.




One Comment