ಆಪರೇಷನ್ ಸಿಂಧೂರ ಬಳಿಕ ಮೊದಲ ಬಾರಿಗೆ SCO ಸಭೆಗೆ ಪಾಕಿಸ್ತಾನಕ್ಕೆ ಭಾರತದ ಆಹ್ವಾನ..!

ನವದೆಹಲಿ: ಆಪರೇಷನ್ ಸಿಂಧೂರ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ನಾಗರಿಕತೆಗಳ ಸಂವಾದ ವೇದಿಕೆ ಕಾರ್ಯಕ್ರಮಕ್ಕೆ ಪಾಕಿಸ್ತಾನವನ್ನು ಭಾರತ ಆಹ್ವಾನಿಸಿದೆ.
ನವೆಂಬರ್ 20ರಿಂದ 22ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಸ್ಸಿಒನ ಎಲ್ಲ 10 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚ್ಚಿ ಅವರಿಗೂ ಆಹ್ವಾನ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
2025ರ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ಹಿರಿಯ ಸಚಿವರೊಬ್ಬರಿಗೆ ಭಾರತ ನೀಡಿರುವ ಮೊದಲ ಅಧಿಕೃತ ಆಹ್ವಾನ ಇದಾಗಿದೆ.
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ ಕೈಗೊಂಡಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಇದೀಗ ಅಂತಾರಾಷ್ಟ್ರೀಯ ವೇದಿಕೆಯ ಕಾರ್ಯಕ್ರಮಕ್ಕೆ ಪಾಕಿಸ್ತಾನವನ್ನು ಆಹ್ವಾನಿಸಿರುವುದು ಗಮನ ಸೆಳೆದಿದೆ.
ನವದೆಹಲಿಯಲ್ಲಿ ನಡೆಯಲಿರುವ ಮೊದಲ ಎಸ್ಸಿಒ ನಾಗರಿಕತೆಗಳ ಸಂವಾದ ವೇದಿಕೆ ಕಾರ್ಯಕ್ರಮದಲ್ಲಿ ಸದಸ್ಯ ರಾಷ್ಟ್ರಗಳ ಸಂಸ್ಕೃತಿ, ಪರಂಪರೆ ಮತ್ತು ಐತಿಹಾಸಿಕ ಸಂಬಂಧಗಳ ಕುರಿತು ಚರ್ಚೆ ನಡೆಯಲಿದೆ.
ಭಾರತದ ಸಂಸ್ಕೃತಿ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. ದೆಹಲಿಯ ಐತಿಹಾಸಿಕ ಪುರಾನಾ ಕಿಲಾದಲ್ಲಿ ಕಾರ್ಯಕ್ರಮ ನಡೆಯುವ ನಿರೀಕ್ಷೆಯಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆಯಿದೆ.
2025ರಲ್ಲಿ ಚೀನಾದ ಟಿಯಾಂಜಿನ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಗರಿಕತೆಗಳ ಸಂವಾದ ವೇದಿಕೆಯ ಪ್ರಸ್ತಾವನೆ ಮುಂದಿಟ್ಟಿದ್ದರು. ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಹಕಾರ ಹೆಚ್ಚಿಸುವುದು, ಐತಿಹಾಸಿಕ ಪರಂಪರೆಯನ್ನು ಪರಿಚಯಿಸುವುದು ಹಾಗೂ ಜನರ ನಡುವಿನ ಸಂಬಂಧ ಬಲಪಡಿಸುವುದು ಈ ವೇದಿಕೆಯ ಪ್ರಮುಖ ಉದ್ದೇಶವಾಗಿದೆ. ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಪ್ರದಾಯಿಕ ಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಭಾರತದಿಂದ ಆಹ್ವಾನ ನೀಡಲಾಗಿದ್ದರೂ ಪಾಕಿಸ್ತಾನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಪಾಕಿಸ್ತಾನದ ಸಂಸ್ಕೃತಿ ಸಚಿವ ಔರಂಗಜೇಬ್ ಖಾನ್ ಖಿಚ್ಚಿ ಭಾರತಕ್ಕೆ ಆಗಮಿಸುತ್ತಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.
ಒಂದು ವೇಳೆ ಅವರು ಸಭೆಯಲ್ಲಿ ಭಾಗವಹಿಸಿದರೆ, 2023ರ ಬಳಿಕ ಭಾರತಕ್ಕೆ ಭೇಟಿ ನೀಡಿದ ಮೊದಲ ಪಾಕಿಸ್ತಾನಿ ಸಚಿವರಾಗಲಿದ್ದಾರೆ.
2023ರ ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಎಸ್ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಅಂದಿನ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ್ದರು. ಪಾಕಿಸ್ತಾನಕ್ಕೆ ಆಹ್ವಾನ ನೀಡಿರುವುದನ್ನು ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಬದಲಾವಣೆ ಎಂದು ಪರಿಗಣಿಸಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಸ್ಸಿಒನ ಎಲ್ಲ ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸುವ ಭಾಗವಾಗಿ ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಮುಂದುವರಿದಿದ್ದರೂ ಬಹುಪಕ್ಷೀಯ ವೇದಿಕೆಗಳಲ್ಲಿ ಉಭಯ ದೇಶಗಳು ಭಾಗವಹಿಸುತ್ತಿವೆ.
ಹೀಗಾಗಿ ದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪಾಕಿಸ್ತಾನ ಯಾವ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.




One Comment