ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಮಟ್ಟ ಅರ್ಧಕ್ಕ ಅರ್ಧ ಇಳಿಕೆ..!

ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿಯುತ್ತಿದೆ. ಅಕ್ಟೋಬರ್ 1ರಿಂದ ರಾಜ್ಯದ 13 ಪ್ರಮುಖ ಜಲಾಶಯಗಳಿಂದ ಪ್ರತಿದಿನ ಸರಾಸರಿ 3.38 ಟಿಎಂಸಿ ಅಡಿ ನೀರು ಹೊರಹರಿಯುತ್ತಿದೆ. ಸದ್ಯ ಜಲಾಶಯಗಳಲ್ಲಿ ಒಟ್ಟು 533.84 ಟಿಎಂಸಿ ಅಡಿ ನೀರಿದ್ದರೂ, ಬಳಕೆಗೆ ಲಭ್ಯವಿರುವ ಲೈವ್ ಸ್ಟೋರೇಜ್ ಪ್ರಮಾಣ ಕೇವಲ 274 ಟಿಎಂಸಿ ಅಡಿಯಷ್ಟಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ 444 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇತ್ತು. ಆದರೆ, ಈ ಬಾರಿ ನೀರಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗಿದೆ. ಮಳೆಗಾಲ ಮುಗಿಯುತ್ತಿರುವ ಸಂದರ್ಭದಲ್ಲಿ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಇನ್ನು ಜಲಾನಯನ ಪ್ರದೇಶವಾರು ನೀರಿನ ಸಂಗ್ರಹ ಗಮನಿಸಿದರೆ, ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ 241 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೇವಲ 32.29 ಟಿಎಂಸಿ ಅಡಿ ನೀರು ಲಭ್ಯವಿದೆ.
ರಾಜ್ಯದ ಐದು ಜಲಾಶಯಗಳಿಗೆ ಸದ್ಯ ಯಾವುದೇ ಒಳಹರಿವು ಇಲ್ಲ ಎಂದು ವರದಿಯಾಗಿದೆ. ಆದರೂ, ಕೆಳಹರಿವಿನ ರಾಜ್ಯಗಳಿಗೆ ನೀರು ಬಿಡುವುದು, ನದಿಗಳ ಪರಿಸರ ಹರಿವು ಕಾಪಾಡುವುದು ಹಾಗೂ ಕುಡಿಯುವ ನೀರಿನ ಯೋಜನೆಗಳ ಅಗತ್ಯಕ್ಕಾಗಿ ಜಲಾಶಯಗಳಿಂದ ನೀರು ಹೊರಬಿಡಲಾಗುತ್ತಿದೆ.
ಜಲಾಶಯಗಳ ಪೈಕಿ ಆಲಮಟ್ಟಿಯಲ್ಲಿ ಅತಿ ಹೆಚ್ಚು 72 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇದೆ. ಹಿಡಕಲ್‌ನಲ್ಲಿ 46, ತುಂಗಭದ್ರಾದಲ್ಲಿ 43 ಹಾಗೂ ಭದ್ರಾ ಜಲಾಶಯದಲ್ಲಿ 42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಇನ್ನು ವಾಣಿವಿಲಾಸ ಸಾಗರದಲ್ಲಿ 17, ಕೆಆರ್‌ಎಸ್‌ನಲ್ಲಿ 15, ಮಲಪ್ರಭಾದಲ್ಲಿ 14, ಹೇಮಾವತಿಯಲ್ಲಿ 11.5, ಹಾರಂಗಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ತಲಾ 4 ಹಾಗೂ ಕಬಿನಿಯಲ್ಲಿ 1.3 ಟಿಎಂಸಿ ಅಡಿ ಲೈವ್ ಸ್ಟೋರೇಜ್ ಇದೆ ಎಂದು ನೀಡಿರುವ ಅಂಕಿಅಂಶಗಳು ತಿಳಿಸಿವೆ.
ಒಟ್ಟಾರೆ, ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳು ಮತ್ತು ನದಿಗಳ ನಿರಂತರ ಹರಿವಿಗೆ ಸಮರ್ಪಕ ನೀರು ನಿರ್ವಹಣೆ ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಒಳಹರಿವು ಮತ್ತು ನೀರಿನ ಬಳಕೆಯ ಪ್ರಮಾಣ ರಾಜ್ಯದ ಜಲಸಂಪನ್ಮೂಲ ನಿರ್ವಹಣೆಯಲ್ಲಿ ನಿರ್ಣಾಯಕವಾಗಲಿದೆ.



