ದಸರಾ ಜಂಬೂಸವಾರಿಯಲ್ಲಿ ಸೋಮಣ್ಣ ಆನೆ ರಂಪಾಟ!

ಶಿವಮೊಗ್ಗ: ದಸರಾ ಜಂಬೂಸವಾರಿಯ ವೇಳೆ 650 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ಗಲಿಬಿಲಿಗೊಂಡು ರಂಪಾಟ ನಡೆಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮೆರವಣಿಗೆಯ ಮಧ್ಯದಲ್ಲೇ ಆನೆ ದಿಢೀರ್ ದಿಕ್ಕಾಪಾಲಾಗಿ ಓಡಿದ್ದು, ಮಾರ್ಗದಲ್ಲಿದ್ದ ಮರಗಳು, ಕಾರುಗಳು ಹಾಗೂ ಬೈಕ್‌ಗಳಿಗೆ ಅಪ್ಪಳಿಸಿದೆ. ಈ ಘಟನೆಯಲ್ಲಿ ಬೆಳ್ಳಿ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೂ ಹಾನಿಯಾಗಿದೆ.
ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದರಿಂದ ಆತಂಕಕ್ಕೆ ಒಳಗಾಗಿ ಈ ರೀತಿ ವರ್ತಿಸಿರಬಹುದು ಎಂದು ಅಂದಾಜಿಸಲಾಗಿದೆ. ಆನೆಯನ್ನು ನಿಯಂತ್ರಣಕ್ಕೆ ತರಲು ಮಾವುತರು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಅಂಬಾರಿಯನ್ನು ಸೋಮಣ್ಣ ಆನೆ ಮೊದಲ ಬಾರಿಗೆ ಹೊತ್ತಿದ್ದರಿಂದ ಟೆನ್ಷನ್ ಅಥವಾ ಆತಂಕಕ್ಕೆ ಒಳಗಾಗಿ ಈ ರೀತಿ ವರ್ತಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಾವುತರು ಆನೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಕೊನೆಯ ಕ್ಷಣದಲ್ಲಿ ಸಾಗರ ಆನೆಯ ಬದಲಿಗೆ ಸೋಮಣ್ಣನನ್ನು ಅಂಬಾರಿ ಹೊರುವುದಕ್ಕೆ ಆಯ್ಕೆ ಮಾಡಿದ್ದ ಅಧಿಕಾರಿಗಳ ನಿರ್ಧಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗೆ ಕನಿಷ್ಠ ಒಂದು ತಿಂಗಳ ತಾಲೀಮು ಅಗತ್ಯ ಎಂಬ ನಿಯಮವನ್ನು ಅಧಿಕಾರಿಗಳು ಪಾಲಿಸಿದ್ದಾರೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಆನೆಯ ಆಯ್ಕೆ, ತಾಲೀಮು ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.



