ರಾಜ್ಯ

ದುಡ್ಡಿನ ಅಲಂಕಾರದಲ್ಲಿ ಧನಲಕ್ಷ್ಮಿ ದರ್ಶನ!

ದೇವಿಗೆ ಹಣ್ಣು – ಕಾಯಿ, ಹೂವುಗಳಿಂದ ಅಲಂಕಾರ ಮಾಡೋದನ್ನ ನೋಡಿದ್ದೇವೆ. ಆದ್ರೆ ಇಲ್ಲಿ ದೇವಿಗೆ ಅಲಂಕಾರ ಮಾಡಿರೋದು ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳಿಂದ! ದಾವಣಗೆರೆಯ ಕನ್ನಿಕಾ ಪರಮೇಶ್ವರಿ ದೇವಿಗೆ ಬರೋಬ್ಬರಿ 9.50 ಲಕ್ಷ ರೂಪಾಯಿ ಹಣದ ನೋಟುಗಳಿಂದ ವಿಶೇಷ ಸಿಂಗಾರ ಮಾಡಲಾಗಿದೆ. ಶತಮಾನಗಳ ಇತಿಹಾಸವಿರುವ ಈ ವಿಶಿಷ್ಟ ಧನಲಕ್ಷ್ಮಿ ಪೂಜೆ ಭಕ್ತರ ಗಮನ ಸೆಳೆದಿದೆ. ಹಾಗಾದ್ರೆ ಈ ಹಣದ ಅಲಂಕಾರದ ವಿಶೇಷತೆ ಏನು? ನೋಡೋಣ .

ಗರಿಗರಿ ನೋಟುಗಳು… ಕಂಗೊಳಿಸುವ ದೇವಿಯ ಮೂರ್ತಿ… ಲಕ್ಷಾಂತರ ರೂಪಾಯಿ ಹಣದ ಅದ್ಧೂರಿ ಅಲಂಕಾರ! ಇದು ದಾವಣಗೆರೆಯ ಹಳೇ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ದೃಶ್ಯ. ದಸರಾ ಹಬ್ಬದ ಪ್ರಯುಕ್ತ ದೇವಿಗೆ ವಿಶೇಷ ಧನಲಕ್ಷ್ಮಿ ಪೂಜೆ ನೆರವೇರಿಸಲಾಗಿದ್ದು, ಬರೋಬ್ಬರಿ 9.50 ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸಲಾಗಿದೆ .

ಸಾಮಾನ್ಯವಾಗಿ ದೇವರ ಪೂಜೆಗೆ ಹಣ್ಣು-ಕಾಯಿ, ಹೂವು, ಅರಿಶಿನ, ಕುಂಕುಮಗಳನ್ನು ಬಳಸುತ್ತೇವೆ. ಆದ್ರೆ ಕನ್ನಿಕಾ ಪರಮೇಶ್ವರಿ ದೇವಿಯ ಧನಲಕ್ಷ್ಮಿ ಪೂಜೆಯಲ್ಲಿ ಹಣದ ನೋಟುಗಳೇ ಪ್ರಮುಖ ಆಕರ್ಷಣೆ. 10, 20, 50, 100, 200, 500 ಹಾಗೂ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬಳಸಿ ದೇವಿಗೆ ವಿಶೇಷ ಸಿಂಗಾರ ಮಾಡಲಾಗಿದೆ .

ದಾವಣಗೆರೆಯಲ್ಲಿ ಕಳೆದ ಒಂದು ಶತಮಾನದಿಂದಲೂ ಕನ್ನಿಕಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಬಗೆಯ ಪೂಜೆ ಮತ್ತು ಅಲಂಕಾರಗಳು ನಡೆಯುತ್ತವೆ. ಅರಿಶಿನ-ಕುಂಕುಮ, ಮಂತ್ರಾಕ್ಷತೆ, ಮುತ್ತಿನ ಅಲಂಕಾರ ಹಾಗೂ ವಿಳ್ಯದೆಲೆಯ ಪೂಜೆಯ ಬಳಿಕ ಕೊನೆಯ ದಿನ ಧನಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ .

ಇನ್ನು ಈ ಬಾರಿಯ ಅಲಂಕಾರದಲ್ಲಿ ಸಪ್ತಸಾಗರ ಹಾಗೂ ಸಪ್ತಬಾಗಿಲುಗಳ ಪರಿಕಲ್ಪನೆ ವಿಶೇಷವಾಗಿದೆ. ಸ್ವರ್ಗ ಪ್ರಾಪ್ತಿಗೆ ಏಳು ಬಾಗಿಲುಗಳನ್ನು ದಾಟಬೇಕು ಎಂಬ ನಂಬಿಕೆಯ ಆಧಾರದಲ್ಲಿ ಏಳು ಬಾಗಿಲುಗಳ ವಿನ್ಯಾಸ ರೂಪಿಸಲಾಗಿದೆ. ಈ ವಿಶಿಷ್ಟ ಅಲಂಕಾರವನ್ನು ಪೂರ್ಣಗೊಳಿಸಲು ಬರೋಬ್ಬರಿ ಮೂರು ದಿನಗಳ ಸಮಯ ತೆಗೆದುಕೊಳ್ಳಲಾಗಿದೆ .

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಶೇಷವೆಂದರೆ, ಈ ಅಲಂಕಾರಕ್ಕೆ ಬಳಸಿರುವ ಹಣ ಭಕ್ತರಿಂದ ಸಂಗ್ರಹಿಸಲಾದದ್ದು . ಪೂಜೆ ಮುಗಿದ ಬಳಿಕ ಈ ಹಣ ದೇವಸ್ಥಾನದ ಸಮಿತಿಗೆ ಸೇರುತ್ತದೆ . ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಬೇಕು, ಆರ್ಥಿಕ ಸಮೃದ್ಧಿ ನೆಲೆಸಬೇಕು ಎಂಬ ಉದ್ದೇಶದಿಂದ ಅನೇಕ ಭಕ್ತರು ಧನಲಕ್ಷ್ಮಿ ಪೂಜೆಯಲ್ಲಿ ಭಾಗಿಯಾಗುತ್ತಾರೆ .

ಒಟ್ಟಿನಲ್ಲಿ , ಭಕ್ತಿ ಮತ್ತು ಸಂಪ್ರದಾಯದ ಜೊತೆಗೆ ಆರ್ಥಿಕ ಸಮೃದ್ಧಿಯ ಆಶಯವನ್ನೂ ಸಾರುವ ದಾವಣಗೆರೆಯ ಕನ್ನಿಕಾ ಪರಮೇಶ್ವರಿ ದೇವಿಯ ಈ ಹಣದ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳಿಂದ ಕಂಗೊಳಿಸುತ್ತಿರುವ ದೇವಿಯ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಿದ್ದಾರೆ .

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker