
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಣ್‌ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಬಿಗ್ ಬಜೆಟ್ ಸಿನಿಮಾಗೆ ಇದೀಗ ಅಮೆರಿಕದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ವಿಶೇಷ ಅಂದ್ರೆ, ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಬರೋಬ್ಬರಿ ಶೇಕಡಾ 27ರಷ್ಟು ಏರಿಕೆ ಕಂಡುಬಂದಿದೆ. ಇದು ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಆರಂಭದಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ‘ರಾಮಾಯಣ’ ಚಿತ್ರದ ಟಿಕೆಟ್ ಬುಕಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ನಿರ್ಮಾಪಕ ನಮಿತ್ ಮಲ್ಹೋತ್ರಾ ರೂಪಿಸಿದ ವಿಶೇಷ ಪ್ರಚಾರ ತಂತ್ರ ಇದೀಗ ವರ್ಕ್‌ಔಟ್ ಆಗಿದೆ. ಅಮೆರಿಕದ ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನ ಚಿತ್ರದ ಪ್ರಚಾರಕ್ಕೆ ದೊಡ್ಡ ಮಟ್ಟದ ಬಲ ನೀಡಿದೆ.
ಈ ಕಾರ್ಯಕ್ರಮಕ್ಕೆ ಅಮೆರಿಕದ ಖ್ಯಾತ ಕಂಟೆಂಟ್ ಕ್ರಿಯೇಟರ್‌ಗಳನ್ನು ಆಹ್ವಾನಿಸಲಾಗಿತ್ತು. ನಟರಾದ ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಹಲವು ಕಲಾವಿದರು ಮತ್ತು ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷ ಪ್ರದರ್ಶನ ವೀಕ್ಷಿಸಿದ ಅತಿಥಿಗಳು ಚಿತ್ರದ ದೃಶ್ಯ ವೈಭವ ಮತ್ತು ನಿರ್ಮಾಣದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಕೆಲವರು ‘ರಾಮಾಯಣ’ ಸಿನಿಮಾವನ್ನು ಹಾಲಿವುಡ್‌ನ ಜನಪ್ರಿಯ ‘ಲಾರ್ಡ್ ಆಫ್ ದಿ ರಿಂಗ್ಸ್’ ಸರಣಿಗೂ ಹೋಲಿಕೆ ಮಾಡಿದ್ದಾರೆ. ಈ ಸಕಾರಾತ್ಮಕ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಮೆರಿಕದಲ್ಲಿ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಶೇಕಡಾ 27ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಚಿತ್ರದ ಟಿಕೆಟ್ ಮಾರಾಟ ಹೆಚ್ಚಿಸಲು ನಿರ್ಮಾಪಕರು ಮತ್ತೊಂದು ತಂತ್ರ ಅನುಸರಿಸಿದ್ದಾರೆ. ಅಮೆರಿಕದಲ್ಲಿ ‘ರಾಮಾಯಣ’ ಚಿತ್ರದ ಟಿಕೆಟ್ ದರವನ್ನು ತುಸು ಕಡಿಮೆ ನಿಗದಿಪಡಿಸಲಾಗಿದೆ. ದೊಡ್ಡ ಬಜೆಟ್‌ನ ಸಿನಿಮಾ ಆಗಿದ್ದರೂ ಪ್ರೇಕ್ಷಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಲಭ್ಯವಾಗುವಂತೆ ಮಾಡಲಾಗಿದೆ. ವಿದೇಶಗಳಲ್ಲಿರುವ ಭಾರತೀಯ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಸೆಳೆಯುವುದು ಇದರ ಉದ್ದೇಶವಾಗಿದೆ.
ಒಂದು ಕಡೆ ವಿಶೇಷ ಪ್ರದರ್ಶನದ ಮೆಚ್ಚುಗೆ, ಮತ್ತೊಂದು ಕಡೆ ಕಡಿಮೆ ಟಿಕೆಟ್ ದರ. ಈ ಎರಡು ತಂತ್ರಗಳು ಇದೀಗ ‘ರಾಮಾಯಣ’ ಚಿತ್ರದ ಜಾಗತಿಕ ಪ್ರಚಾರಕ್ಕೆ ದೊಡ್ಡ ಬಲ ನೀಡಿವೆ.
ಒಟ್ಟಿನಲ್ಲಿ, ಬಿಡುಗಡೆಯ ಮುನ್ನವೇ ಅಮೆರಿಕದಲ್ಲಿ ಬುಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿರುವ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬ ಕುತೂಹಲ ಈಗಿನಿಂದಲೇ ಹೆಚ್ಚಾಗಿದೆ.




One Comment