ಸಿನಿಮಾ ಸ್ಟೈಲ್ನಲ್ಲಿ ಸ್ವತಃ ಕಿಡ್ನಾಪ್ ಡ್ರಾಮಾ ಆಡಿದ ಅಸಾಮಿ! ಕೊನೆಗೆ ಏನಾಯ್ತು ಗೊತ್ತಾ?

ಸಿನಿಮಾಗಳಲ್ಲಿ ಹಣಕ್ಕಾಗಿ ಕಿಡ್ನಾಪ್ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಾಶಯ ಸಾಲ ತೀರಿಸಲು ತಾನೇ ಕಿಡ್ನಾಪ್ ಆಗಿರುವುದಾಗಿ ನಾಟಕವಾಡಿ, ಸ್ವಂತ ಕುಟುಂಬಕ್ಕೇ ಬರೋಬ್ಬರಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ! ಸದ್ಯ ಈತನ ಕಿಡ್ನಾಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ಗುಜರಾತ್ನ ಸೂರತ್ ಮೂಲದ ವ್ಯಕ್ತಿಯೊಬ್ಬ ತೀವ್ರ ಸಾಲದ ಸುಳಿಗೆ ಸಿಲುಕಿದ್ದ. ಹೇಗಾದರೂ ಮಾಡಿ ಹಣ ಹೊಂದಿಸಲೇಬೇಕು ಎಂದು ಸ್ಕೆಚ್ ಹಾಕಿದ ಈತ, ತಾನೇ ಕಿಡ್ನಾಪ್ ಆಗಿರುವಂತೆ ಒಂದು ಮಾಸ್ಟರ್ ಪ್ಲಾನ್ ಮಾಡಿದ. ಕೈಕಾಲುಗಳನ್ನು ಕಟ್ಟಿಹಾಕಿಕೊಂಡು, ಬಾಯಿಗೆ ಬಟ್ಟೆ ತುರುಕಿ ಯಾರೋ ತನ್ನನ್ನು ಅಪಹರಿಸಿ ಕೂಡಿಟ್ಟಿದ್ದಾರೆ ಎಂದು ಬಿಂಬಿಸುವ ವಿಡಿಯೋವೊಂದನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.

ಕುಟುಂಬಕ್ಕೆ ಕಳುಹಿಸಿದ ವಿಡಿಯೋ!
ಅಷ್ಟಕ್ಕೇ ನಿಲ್ಲದ ಈತ, ಆ ವಿಡಿಯೋವನ್ನು ತನ್ನದೇ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ. ಜೊತೆಗೆ, “ನಿಮ್ಮ ಮಗ ಬದುಕಿ ಬೇಕು ಎಂದರೆ ತಕ್ಷಣವೇ 50 ಲಕ್ಷ ರೂಪಾಯಿ ಹಣ ಕೊಡಬೇಕು, ಇಲ್ಲದಿದ್ದರೆ ಕೊಲೆ ಮಾಡುತ್ತೇವೆ” ಎಂದು ಅಪಹರಣಕಾರರ ಹೆಸರಿನಲ್ಲಿ ತಾನೇ ಬೆದರಿಕೆ ಹಾಕಿದ್ದಾನೆ.
ಪೊಲೀಸ್ ಎಂಟ್ರಿ.. ಅಸಾಮಿ ಅಂದರ್!
ಮಗನ ವಿಡಿಯೋ ನೋಡಿ ಗಾಬರಿಯಾದ ಕುಟುಂಬಸ್ಥರು ತಕ್ಷಣವೇ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಅಸಲಿ ಕಹಾನಿ ಬೆಳಕಿಗೆ ಬಂದಿದೆ. ಮೊಬೈಲ್ ಲೊಕೇಶನ್ ಹಾಗೂ ತಾಂತ್ರಿಕ ನೆರವು ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇವಲ 6 ಗಂಟೆಗಳಲ್ಲಿ ಈತನನ್ನು ಪತ್ತೆ ಹಚ್ಚಿದ್ದಾರೆ.
ಆದರೆ ಅಲ್ಲಿ ಹೋಗಿ ನೋಡಿದಾಗ ಪೊಲೀಸರಿಗೇ ಶಾಕ್! ಅಲ್ಲಿ ಯಾವುದೇ ಕಿಡ್ನಾಪರ್ಸ್ ಇರಲಿಲ್ಲ. ಈತನೇ ಸಾಲ ತೀರಿಸಲು ತನ್ನ ಕುಟುಂಬದಿಂದ ಹಣ ವಸೂಲಿ ಮಾಡಲು ಈ ಡ್ರಾಮಾ ಆಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಈತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



