ಧನ್ವೀರ್ ಆಡಿಯೊ ವಿವಾದದ ಬಗ್ಗೆ ದರ್ಶನ್ ಹೇಳಿದ್ದೇನು?

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ಚರ್ಚೆಗೆ ಬಂದಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಭೇಟಿಯಾದ ವೇಳೆ, ಧನ್ವೀರ್ಗೆ ಸಂಬಂಧಿಸಿದ ಆಡಿಯೊ ವಿವಾದದ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ದರ್ಶನ್ ಅವರನ್ನು ಜೈಲಿನಿಂದ ಬಿಡಿಸಲು ವಿಜಯಲಕ್ಷ್ಮಿ ಅವರಿಗೆ ಇಷ್ಟವಿಲ್ಲ ಎಂಬ ಅರ್ಥದಲ್ಲಿ ಹರಿದಾಡಿದ ಆಡಿಯೊ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಈ ವೇಳೆ ವಿಜಯಲಕ್ಷ್ಮಿ ಅವರು, “ನಿಮ್ಮನ್ನು ಜೈಲಿನಿಂದ ಬಿಡಿಸಲು ನನಗೆ ಇಷ್ಟವಿಲ್ಲ” ಎಂದು ತಮಾಷೆಯಾಗಿ ಹೇಳಿದಾಗ, ದರ್ಶನ್ ನಗುತ್ತಾ “ಹೌದಾ ಪುಟ್ಟಾ” ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿನ ಭೇಟಿಯ ವೇಳೆ ಧನ್ವೀರ್ಗೆ ಸಂಬಂಧಿಸಿದ ಆಡಿಯೊ ಹಾಗೂ ನಾಗರಾಜ್ ಸೇರಿದಂತೆ ಕೆಲವರ ಜೊತೆ ನಡೆದ ಮಾತುಕತೆಯ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ. ಧನ್ವೀರ್ ಮನೆ ಬಳಿ ಹಣ ಕೇಳಲು ಹೋದ ಸಂದರ್ಭದಲ್ಲಿ ನಡೆದ ಘಟನೆಗಳ ಕುರಿತು ವಿಜಯಲಕ್ಷ್ಮಿ ಅವರು ದರ್ಶನ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವಾಗಿ ಕಾನೂನು ಹೋರಾಟ ನಡೆಸುವಂತೆ ದರ್ಶನ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಧನ್ವೀರ್ ಈ ರೀತಿ ನಡೆದುಕೊಳ್ಳುತ್ತಿದ್ದರೆ ಅವರ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಯನ್ನೂ ದರ್ಶನ್ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬದವರು, ಈ ವಿಚಾರದ ಹಿಂದೆ ಯಾರಿದ್ದಾರೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. “ಅವರು ಏನೇ ಮಾತನಾಡಲಿ, ನೀವು ಕಾನೂನಿನ ಹಾದಿ ಬಿಟ್ಟು ಹೋಗಬೇಡಿ. ನಮಗೂ ಕಾಲ ಬರುತ್ತದೆ” ಎಂದು ವಿಜಯಲಕ್ಷ್ಮಿ ಅವರಿಗೆ ದರ್ಶನ್ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.
ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಆಡಿಯೊ ಹಾಗೂ ಜೈಲಿನ ಭೇಟಿಯ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ.




One Comment