ಸಿಲಿಕಾನ್ ಸಿಟಿಯಲ್ಲಿ ವೀಲಿಂಗ್ ಹಾವಳಿ: ಹಾಡಹಗಲೇ ಬೈಕ್ ಸ್ಟಂಟ್ ಮಾಡಿ ರೀಲ್ಸ್ ಅಪ್‌ಲೋಡ್!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಲಿಂಗ್ ಮಾಡುವ ಯುವಕರ ಹಾವಳಿ ಮತ್ತೆ ಹೆಚ್ಚಾಗಿದ್ದು, ಇದೀಗ ಹಾಡಹಗಲೇ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಜಯನಗರ ಸಮೀಪದ ನ್ಯಾಷನಲ್ ಕಾಲೇಜು ಬಳಿ ಯುವಕರು ರಸ್ತೆಯಲ್ಲೇ ಬೈಕ್ ವೀಲಿಂಗ್ ಮಾಡಿದ್ದು, ಈ ದೃಶ್ಯಗಳನ್ನು ತಾವೇ ಮೊಬೈಲ್‌ನಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಯುವಕರ ಈ ಹುಚ್ಚಾಟ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ರಾತ್ರಿ ವೇಳೆ ನಿರ್ಜನ ರಸ್ತೆಗಳಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರು ಇದೀಗ ಹಗಲಿನಲ್ಲಿಯೇ ಇಂತಹ ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುವ ರಸ್ತೆಯಲ್ಲಿ ಬೈಕ್‌ನ ಮುಂಭಾಗದ ಚಕ್ರವನ್ನು ಮೇಲಕ್ಕೆತ್ತಿ ವೇಗವಾಗಿ ಚಲಾಯಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಪಡೆಯುವ ಉದ್ದೇಶದಿಂದ ಯುವಕರು ಇಂತಹ ಅಪಾಯಕಾರಿ ಸ್ಟಂಟ್‌ಗಳಿಗೆ ಮುಂದಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಹಂಬಲದಲ್ಲಿ ತಮ್ಮ ಜೀವದ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆಯನ್ನೂ ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.
ಈ ಘಟನೆ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದು, ವೀಲಿಂಗ್ ಮಾಡಿದ ಯುವಕರೇ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ರಸ್ತೆಯಲ್ಲಿ ಇಂತಹ ಅಪಾಯಕಾರಿ ಬೈಕ್ ಸ್ಟಂಟ್‌ಗಳು ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರ ವಿರುದ್ಧ ಸಂಚಾರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಹುಚ್ಚಿಗೆ ಬಿದ್ದು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ವೀಲಿಂಗ್ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ.



