ಲಾಡು ಬೆಲೆ ಕೇಳಿ ಕೆಂಡಾಮಂಡಲವಾದ ಸಚಿವರು! ‘ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್’
ಹಾಸನಾಂಬೆ ಲಾಡು 100 ರೂ.ಗೆ ಮಾರಾಟ! ಗರಂ ಆದ ಸಚಿವ ಶಿವಲಿಂಗೇಗೌಡ, ಕೊಟ್ರು ಖಡಕ್ ವಾರ್ನಿಂಗ್

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮೊದಲ ದಿನವೇ ದೇವಾಲಯಕ್ಕೆ ಭಕ್ತಸಾಗರ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ದೇವಾಲಯದಲ್ಲಿ 100 ರೂಪಾಯಿಗೆ ಲಾಡು ಪ್ರಸಾದ ಮಾರಾಟ ಮಾಡುತ್ತಿರುವ ವಿಚಾರ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಲಾಡು ಪ್ರಸಾದದ ದುಬಾರಿ ದರಕ್ಕೆ ಗರಂ ಆದ ಸಚಿವರು, 60 ರೂಪಾಯಿಗೆ ಎರಡು ಲಾಡುಗಳನ್ನು ನೀಡುವಂತೆ ಸಂಬಂಧಪಟ್ಟವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಹಾಸನಾಂಬೆ ದೇವಾಲಯದ ಆವರಣದಲ್ಲಿ ಲಾಡು ಪ್ರಸಾದವನ್ನು 100 ರೂಪಾಯಿಗೆ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸಚಿವ ಶಿವಲಿಂಗೇಗೌಡ, ಪ್ರಸಾದ ಮಾರಾಟದ ಟೆಂಡರ್ ಪಡೆದಿರುವ ಇಸ್ಕಾನ್ ಸಂಸ್ಥೆಯ ಪ್ರತಿನಿಧಿಗಳಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಡು ಪ್ರಸಾದ ಮಾರಾಟಕ್ಕೆ 56.16 ರೂಪಾಯಿಗೆ ಟೆಂಡರ್ ನೀಡಲಾಗಿದೆ. ಹೀಗಿರುವಾಗ ಭಕ್ತರಿಂದ 100 ರೂಪಾಯಿ ವಸೂಲಿ ಮಾಡುವುದು ಸರಿಯಲ್ಲ. 60 ರೂಪಾಯಿಗೆ ಎರಡು ಲಾಡುಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ. ಈ ವೇಳೆ, ‘ನಾನು ಸಚಿವ ಮಾತನಾಡುತ್ತಿದ್ದೇನೆ. ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಪ್ರಸಾದ ಮಾರಾಟ ಮುಂದುವರಿಸಿದರೆ ಸ್ಥಳದಲ್ಲೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಸಚಿವರು ನೀಡಿದ್ದಾರೆ. ಭಕ್ತರಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡಬಾರದು ಎಂದು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದರ ಜೊತೆಗೆ 300 ರೂಪಾಯಿ ಹಾಗೂ 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ದೇವಿಯ ದರ್ಶನ ಮಾಡುವ ಭಕ್ತರಿಗೆ ಲಾಡು ಪ್ರಸಾದವನ್ನು ಉಚಿತವಾಗಿ ವಿತರಿಸುವಂತೆ ಸಚಿವರು ಸೂಚಿಸಿದ್ದಾರೆ. ವಿಶೇಷ ದರ್ಶನಕ್ಕೆ ಹಣ ಪಾವತಿಸಿದ ಭಕ್ತರಿಂದ ಪ್ರಸಾದಕ್ಕಾಗಿ ಪ್ರತ್ಯೇಕವಾಗಿ ಹಣ ಪಡೆಯಬಾರದು ಎಂಬುದು ಅವರ ನಿಲುವಾಗಿದೆ.
ಇನ್ನು ಹಾಸನಾಂಬೆ ದೇವಿಯ ದರ್ಶನಕ್ಕೆ ಮೊದಲ ದಿನವೇ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಮುಂಜಾನೆ 3 ಗಂಟೆಯಿಂದಲೇ ದೇವಾಲಯದ ಬಳಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದು, ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿರುವುದರಿಂದ ದೇವಾಲಯದ ಸುತ್ತಮುತ್ತ ಜನಸಂದಣಿ ಹೆಚ್ಚಾಗಿದೆ.
ವಿಶೇಷವಾಗಿ 300 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದ ಭಕ್ತರ ಸಾಲು ಸುಮಾರು ಎರಡು ಕಿಲೋಮೀಟರ್‌ವರೆಗೆ ವಿಸ್ತರಿಸಿದೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ್ಶನ ವ್ಯವಸ್ಥೆ ಹಾಗೂ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಧರ್ಮ ದರ್ಶನದ ಸಾಲು ಹಾಗೂ 300 ಮತ್ತು 1,000 ರೂಪಾಯಿ ವಿಶೇಷ ದರ್ಶನದ ಸಾಲುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ನೂಕುನುಗ್ಗಲು ಉಂಟಾಗದಂತೆ ದೇವಾಲಯದ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಗಮ ದರ್ಶನಕ್ಕಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ, ಹಾಸನಾಂಬೆ ಜಾತ್ರೆಯ ಮೊದಲ ದಿನವೇ ಭಕ್ತರ ಭಾರಿ ಜನಸಂದಣಿ ಮತ್ತು ಲಾಡು ಪ್ರಸಾದದ ದರದ ವಿವಾದ ಗಮನ ಸೆಳೆದಿದೆ. ಭಕ್ತರಿಗೆ ಕಡಿಮೆ ದರದಲ್ಲಿ ಪ್ರಸಾದ ಒದಗಿಸುವಂತೆ ಸಚಿವರು ನೀಡಿರುವ ಸೂಚನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.




One Comment