ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಓಪನ್

ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಗುರುವಾರ (ಅಕ್ಟೋಬರ್ 29) ವಿಧ್ಯುಕ್ತ ಚಾಲನೆ ದೊರೆತಿದೆ. ಮಧ್ಯಾಹ್ನ 12:28ಕ್ಕೆ ಸಂಪ್ರದಾಯದಂತೆ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ದೇವಾಲಯದ ಆವರಣದಲ್ಲಿ ನೆರೆದಿದ್ದ ನೂರಾರು ಭಕ್ತರು ‘ಹಾಸನಾಂಬೆಗೆ ಜಯವಾಗಲಿ’ ಎಂದು ಜಯಘೋಷ ಮೊಳಗಿಸಿದರು.
ಆಶ್ವೀಜ ಮಾಸದ ಮೊದಲ ಗುರುವಾರದಂದು ಸಂಪ್ರದಾಯದಂತೆ ಅರಸು ವಂಶಸ್ಥ ನಂಜರಾಜೆ ಅರಸ್ ಅವರು ಗೊನೆಯುಳ್ಳ ಬಾಳೆ ಕಂಬವನ್ನು ಕಡಿಯುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಬಳಿಕ ಅರ್ಚಕರು ಶಾಸ್ತ್ರೋಕ್ತ ಪೂಜೆ ಸಲ್ಲಿಸಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆದರು.
ಗರ್ಭಗುಡಿ ಬಾಗಿಲು ತೆರೆಯುವ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ದಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಮುಜರಾಯಿ ಖಾತೆ ಸಚಿವ ಬಸಂತಪ್ಪ, ಜಿಲ್ಲಾಧಿಕಾರಿ ಲತಾಕುಮಾರಿ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ದೇವಾಲಯದಲ್ಲಿ 20 ಅರ್ಚಕರ ತಂಡದಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ದೇವಿಯ ನಾಮಸ್ಮರಣೆ ಮಾಡಿದರು.
ಹಾಸನಾಂಬೆಯ ಪವಾಡಗಳ ಬಗ್ಗೆ ಭಕ್ತರಲ್ಲಿ ಅಪಾರ ನಂಬಿಕೆ
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಾಲಯವು ತನ್ನ ವಿಶಿಷ್ಟ ಸಂಪ್ರದಾಯಗಳು ಹಾಗೂ ಧಾರ್ಮಿಕ ನಂಬಿಕೆಗಳಿಂದ ಪ್ರಸಿದ್ಧವಾಗಿದೆ. ವರ್ಷಕ್ಕೊಮ್ಮೆ ಮಾತ್ರ ದೇವಿಯ ಗರ್ಭಗುಡಿ ಬಾಗಿಲು ತೆರೆಯುವುದು ಇಲ್ಲಿನ ಪ್ರಮುಖ ವಿಶೇಷತೆಯಾಗಿದೆ.
ಪ್ರತಿ ವರ್ಷ ಗರ್ಭಗುಡಿ ಬಾಗಿಲು ಮುಚ್ಚುವ ಸಂದರ್ಭದಲ್ಲಿ ಹಚ್ಚುವ ಹಣತೆ, ದೇವಿಗೆ ಅರ್ಪಿಸುವ ನೈವೇದ್ಯ ಹಾಗೂ ಮುಡಿಸುವ ಹೂವುಗಳು ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಹಾಗೆಯೇ ಇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ವಿಶಿಷ್ಟ ನಂಬಿಕೆಯೇ ಹಾಸನಾಂಬೆ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಅಲ್ಲದೆ, ಹಾಸನಾಂಬೆಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಹಾಸನ ಜಿಲ್ಲೆ ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳು ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ.
ಲಕ್ಷಾಂತರ ಭಕ್ತರಿಗಾಗಿ ವಿಶೇಷ ವ್ಯವಸ್ಥೆ
ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಕ್ತರಿಗೆ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಒದಗಿಸಲು ದೇವಾಲಯದ ಹೊರಭಾಗದಲ್ಲಿ ಟೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಾಲಯದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಭಕ್ತರು ಸುಗಮವಾಗಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 30ರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ನವೆಂಬರ್ 11ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯ ಗರ್ಭಗುಡಿ ಬಾಗಿಲು ತೆರೆಯುತ್ತಿದ್ದಂತೆ ಭಕ್ತರಲ್ಲಿ ಸಂಭ್ರಮ ಮನೆಮಾಡಿದ್ದು, ಮುಂದಿನ ದಿನಗಳಲ್ಲಿ ದೇವಿಯ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.




One Comment