ಕಾರು ಮಕ್ಕಳ ಆಟಿಕೆಯಲ್ಲ! ಪೋಷಕರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ

ಬೆಂಗಳೂರು: ಮಕ್ಕಳ ಕೈಗೆ ಕಾರಿನ ಕೀ ಕೊಡುವ ಪೋಷಕರೇ ಎಚ್ಚರ! ನಿಮ್ಮ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳು ಬಲಿಯಾದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು. ಕಾರು ಮಕ್ಕಳ ಆಟಿಕೆಯಲ್ಲ, ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ ಎಂದು ಕರ್ನಾಟಕ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ.
ಮೈಸೂರಿನಲ್ಲಿ 14 ವರ್ಷದ ಬಾಲಕ ಕಾರು ಚಲಾಯಿಸಿ ನಡೆಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ದುರ್ಘಟನೆ ನಡೆದಿದ್ದು 2020ರ ಡಿಸೆಂಬರ್ನಲ್ಲಿ. ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಹಾಗೂ ಅವರ ಐದು ವರ್ಷದ ಮಗು ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ವೋಕ್ಸ್ವ್ಯಾಗನ್ ವೆಂಟೋ ಕಾರನ್ನು ತನ್ನ ಅರಿವಿಲ್ಲದೆ ಮಗ ತೆಗೆದುಕೊಂಡು ಹೋಗಿದ್ದಾನೆ ಎಂದು ತಂದೆ ನದೀಮ್-ಉರ್-ರೆಹಮಾನ್ ವಾದಿಸಿದ್ದರು. ತಮ್ಮ ವಿರುದ್ಧದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ವಾದವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿದೆ. ಸಂಕಷ್ಟ ಎದುರಾದಾಗ ಮಗ ಅಪ್ರಾಪ್ತ ಎಂಬ ನೆಪ ಹೇಳಿ ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆಯೂ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. 2025-26ರಲ್ಲಿ ಅಪ್ರಾಪ್ತರಿಂದ 751 ಅಪಘಾತಗಳು ಸಂಭವಿಸಿರುವುದಾಗಿ ನ್ಯಾಯಾಲಯದ ಗಮನಕ್ಕೆ ಬಂದಿದೆ.
ಪೋಷಕರು ಸ್ವಯಂಪ್ರೇರಿತವಾಗಿ ವಾಹನದ ಕೀಗಳನ್ನು ಅಪ್ರಾಪ್ತರಿಗೆ ನೀಡಿದಾಗ ಸಂಭವಿಸುವ ದುರಂತಗಳಿಗೆ ಅವರ ಜವಾಬ್ದಾರಿಯನ್ನೂ ಪರಿಗಣಿಸಬೇಕಾಗುತ್ತದೆ. ಇದು ನಿರ್ಲಕ್ಷ್ಯವೇ ಅಥವಾ ಗಂಭೀರ ಅಪರಾಧವೇ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಒಟ್ಟಿನಲ್ಲಿ, ಮಕ್ಕಳಿಗೆ ವಾಹನ ನೀಡುವ ಮುನ್ನ ಪೋಷಕರು ಎಚ್ಚರಿಕೆ ವಹಿಸಬೇಕು ಎಂಬ ಸ್ಪಷ್ಟ ಸಂದೇಶವನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ವಾಹನ ಚಲಾಯಿಸಲು ಕಾನೂನುಬದ್ಧ ವಯಸ್ಸು ಮತ್ತು ಮಾನ್ಯ ಚಾಲನಾ ಪರವಾನಗಿ ಇಲ್ಲದ ಮಕ್ಕಳ ಕೈಗೆ ವಾಹನದ ಕೀ ನೀಡುವುದು ಅಪಾಯಕಾರಿ ಮಾತ್ರವಲ್ಲ, ಗಂಭೀರ ಕಾನೂನು ಪರಿಣಾಮಗಳಿಗೂ ಕಾರಣವಾಗಬಹುದು.



