ಕ್ರೀಡೆ

ಅಂದು ಬ್ರೆಜಿಲ್ ಹೊರತುಪಡಿಸಿ ಇಡೀ ಜಗತ್ತು ಅತ್ತಿತು.

ಬರೀ ಕ್ರಿಕೆಟ್ ಹಿಂದೆ ಓಡುತ್ತಿದ್ದ ನಮ್ಮನ್ನು ಆ ಕಾಲಕ್ಕೆ ಫುಟ್ಬಾಲ್ ಹುಚ್ಚಿಗೆ ತಳ್ಳಿದ್ದು 1994 ರ ವರ್ಲ್ಡ್ ಕಪ್ ಫುಟ್ಬಾಲ್. ಭಾರತದಲ್ಲಿ ವ್ಯಾಪಕವಾಗಿ ಟಿವಿಯಲ್ಲಿ ಮೊದಲು ಕಂಡ ವಿಶ್ವಕಪ್ ಅದು. ಅದು ಕ್ರೀಡೆಯೋ ಯುದ್ಧವೋ ಎಂಬ ಗೊಂದಲವಾಗುತಿತ್ತು. ಸೋತರೂ ಗೆದ್ದರೂ ಪ್ರೇಕ್ಷಕರು ಅಳುವುದು, ಗೆದ್ದಾಗ ಇಡೀ ದೇಶಕ್ಕೆ ದೇಶವೇ ಬೀದಿಯ ಮೇಲೆ ಬಂದು ವಾರಗಟ್ಟಲೆ ಸಂಭ್ರಮಿಸುವುದು. ಕ್ರೀಡೆಯಲ್ಲಿ ಭಾವನೆಗಳ ಉಕ್ಕೇರುವಿಕೆಯನ್ನು ನೋಡಬೇಕೆಂದರೆ ನೀವು ಫುಟ್ಬಾಲ್ ನೋಡಬೇಕು. 94ರ ವಿಶ್ವಕಪ್ ನಲ್ಲಿ ಕೊಲಂಬಿಯಾದ ಸ್ಟ್ರೈಕರ್ ಅಂದ್ರೆ ಎಸ್ಕೋಬಾರ್ ತಪ್ಪಾಗಿ ತನ್ನದೇ ಗೋಲ್ ಪೋಸ್ಟಿಗೆ ಚೆಂಡನ್ನು ಒದ್ದಿದ್ದ. ಅವನ ಸೆಲ್ಫ್ ಗೋಲಿನಿಂದಾಗಿ ಕೊಲಂಬಿಯಾ ಅಮೆರಿಕಾದೆದುರು ಸೋತು ಟೂರ್ನಿಯಿಂದ ಹೊರಬಿತ್ತು. ಆ ದೇಶದ ಜನ ಆ ಸೋಲನ್ನು ಅರಗಿಸಿಕೊಳ್ಳಲಿಲ್ಲ. ಸೋಲಿನಿಂದ ಕಂಗೆಟ್ಟ ಪ್ರಕ್ಷುಬ್ಧ ಮನಸ್ಥಿತಿಗಳು ಸೃಷ್ಟಿಸಿದ ವಾತಾವರಣ ಹೇಗಿತ್ತು ಎಂದರೆ, ಪಂದ್ಯ ಮುಗಿದ ಒಂದೇ ವಾರದಲ್ಲಿ ಎಸ್ಕೋಬಾರ್ ನನ್ನು ಗುಂಡಿಟ್ಟು ಕೊಂದರು. 22ರ ಹರೆಯದ ಸ್ಫುರದ್ರೂಪಿ ಪ್ರತಿಭಾವಂತ ಆಟಗಾರನೊಬ್ಬ ಹೀಗೆ ಪ್ರೇಕ್ಷಕರ ಆಕ್ರೋಶಕ್ಕೆ ಬಲಿಯಾದ.. ಅದೇ ವರ್ಲ್ಡ್ ಕಪ್ಪಿನಲ್ಲಿ ಇಟಲಿಯ ಸ್ಟ್ರೈಕರ್ ರಾಬರ್ಟ್ ಬ್ಯಾಜಿಯೊ ಏಕಾಂಗಿಯಾಗಿ ತನ್ನ ದುರ್ಬಲ ಇಟಲಿ ತಂಡವನ್ನು ಫೈನಲಿಗೆ ತಂದುಬಿಟ್ಟ. ಫೈನಲಿನಲ್ಲಿ ಎದುರಿಗಿದ್ದಿದ್ದು ಬಲಿಷ್ಠ ಬ್ರೆಜಿಲ್ ತಂಡ. ಅಂಗಣದಲ್ಲಿ ಪಾದರಸದಂತೆ ಓಡಾಡಿ ಇಲ್ಲಿಯೂ ಬ್ರೆಜಿಲ್ ಬೆವರಿಳಿಸಿದ ಬ್ಯಾಜಿಯೋ ನಿಗದಿತ ಅವಧಿ ಮುಗಿದು ಎಕ್ಸ್ಟ್ರಾ ಟೈಮ್ ಮುಗಿದರೂ ಬ್ರೆಜಿಲಿಗೆ ಜಯಗಳಿಸಲು ಬಿಡಲೇ ಇಲ್ಲ. ಕೊನೆಯದಾಗಿ ಪೆನಾಲ್ಟಿ ಶೂಟ್ ಔಟ್ ಅಳವಡಿಸಲಾಯಿತು. ಅಲ್ಲಿಯೂ ಸಮಬಲದ ಹೋರಾಟ. ಫೈನಲ್ ಪಂದ್ಯದ ಈ ರೋಚಕತೆ ಕಂಡು ಅಂದು ರಾತ್ರಿ ಇಡೀ ಜಗತ್ತು ಆ ಅಸಾಮಾನ್ಯ ಪ್ರತಿಭಾವಂತ ಬ್ಯಾಜಿಯೋನ ಕಾಲುಗಳನ್ನೇ ನೋಡುತಿತ್ತು. ಬ್ಯಾಜಿಯೋ ಒದೆಯುವ ಆ ಕೊನೆಯ ಕಿಕ್ ಒಂದೊಮ್ಮೆ ಪೋಸ್ಟಿನ ಒಳಗೆ ಹೋದರೆ ಇಡೀ ಜಗತ್ತು ಅವನ ಅಭಿಮಾನಿಯಾಗುತ್ತಿತ್ತು. ಆದರೆ ಒತ್ತಡ ಮತ್ತು ಉದ್ವೇಗಕ್ಕೆ ಒಳಗಾದ ಬ್ಯಾಜಿಯೋ ಹೊಡೆತ ಪೋಸ್ಟಿನ ಮೇಲಿನಿಂದ ಹಾರಿ ಹೋಯಿತು. ಅಂದು ಬ್ರೆಜಿಲ್ ಹೊರತುಪಡಿಸಿ ಇಡೀ ಜಗತ್ತು ಅತ್ತಿತು. ಫುಟ್ಬಾಲ್ ಅಂದರೆ ಅಷ್ಟೇನೂ ಇಷ್ಟದಿಂದ ನೋಡದ ಭಾರತೀಯ ಉಪಖಂಡದವರನ್ನು ದೊಡ್ಡಮಟ್ಟದಲ್ಲಿ ಫುಟ್ಬಾಲ್ ಪ್ರೇಮಿಗಳಾಗಿಸಿದ ಪಂದ್ಯವದು. ಆ ಕಾಲದ ಫುಟ್ಬಾಲ್ ನೋಡಿದವರಿಗೆ ಇಂದಿಗೂ ಫುಟ್ಬಾಲ್ ಎಂದರೆ ಅಂದ್ರೆ ಎಸ್ಕೋಬಾರ್ ಮತ್ತು ರಾಬರ್ಟ್ ಬ್ಯಾಜಿಯೋ ನೆನಪಾಗುತ್ತಾರೆ. ಫುಟ್ಬಾಲ್ ಚರಿತ್ರೆಯಲ್ಲಿ ಅವರಿಬ್ಬರಂತಹ ದುರಂತ ನಾಯಕರು ಮತ್ಯಾರೂ ಇಲ್ಲ. ಒಬ್ಬ ಸತ್ತ, ಮತ್ತೊಬ್ಬ ಬದುಕಿಯೂ ಸತ್ತ. ಫುಟ್ಬಾಲ್ ಚೆಂಡು ಕಂಡಾಗ ಅದರಲ್ಲಿ ಅವರಿಬ್ಬರ ಮುಖ ಇಂದಿಗೂ ಕಾಣುತ್ತದೆ..

ಲೇಖಕರು: ಮುಷ್ತಾಕ್ ಹೆನ್ನಾಬೈಲ್

Sent

Com

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker