
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ದರ್ಶನ್ ವಿರುದ್ಧ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿರುವ ಆರೋಪಿ ಪ್ರದೋಶ್ಗೆ ನ್ಯಾಯಾಲಯದಿಂದ ಹಿನ್ನಡೆಯಾಗಿದೆ. ತಂದೆಯ ಕಾರ್ಯ ನೆರವೇರಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪ್ರದೋಶ್ ಪರ ವಕೀಲರು ನ್ಯಾಯಾಲಯದಲ್ಲಿ ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು. ತಂದೆಯ ಕಾರ್ಯಗಳನ್ನು ನೆರವೇರಿಸಲು ಮೂರು ವಾರಗಳ ಕಾಲ ಜಾಮೀನು ನೀಡಬೇಕು ಎಂದು ಕೋರಿದ್ದರು. ಅಲ್ಲದೆ, ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬೇರೆ ಪೊಲೀಸ್ ಠಾಣೆಯಲ್ಲಿ ಹಾಜರಾತಿ ನೀಡಲು ಅವಕಾಶ ಕಲ್ಪಿಸುವಂತೆಯೂ ಮನವಿ ಮಾಡಿದ್ದರು.
ಆದರೆ ಪ್ರದೋಶ್ಗೆ ಜಾಮೀನು ನೀಡುವುದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರಿ ಅಭಿಯೋಜಕರೂ ಕಾನೂನಿನ ಅಂಶಗಳನ್ನು ಮುಂದಿಟ್ಟು ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಪ್ರದೋಶ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಆರೋಪಿಯಾಗಿದ್ದು, ಇದೀಗ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ನ್ಯಾಯಾಲಯದ ಮುಂದೆ ವಿವರವಾದ ಹೇಳಿಕೆ ದಾಖಲಿಸಿದ್ದಾರೆ. ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ದರ್ಶನ್ ಪರ ವಕೀಲರು ಹಲವು ಪ್ರಯತ್ನಗಳನ್ನು ನಡೆಸಿದ್ದರು. ಪೊಲೀಸರ ಒತ್ತಡಕ್ಕೆ ಮಣಿದು ದರ್ಶನ್ ವಿರುದ್ಧ ಅನುಕೂಲಕರ ಹೇಳಿಕೆ ನೀಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು.
ಆದರೆ ಈ ಬೆಳವಣಿಗೆಗಳ ನಡುವೆಯೇ ಪ್ರದೋಶ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಿದ್ದು, ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಜಾಮೀನು ಅರ್ಜಿಯೂ ವಜಾಗೊಂಡಿದೆ.
ಈ ಹಿಂದೆ ಪ್ರಕರಣದ ಇತರ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿತ್ತು. ಇದೀಗ ಪ್ರದೋಶ್ ಅರ್ಜಿಯೂ ವಜಾಗೊಂಡಿರುವುದು ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಆರೋಪಿಗಳ ಜಾಮೀನು ಅರ್ಜಿಗಳು ಹಾಗೂ ಮಾಫಿ ಸಾಕ್ಷಿಗಳ ಹೇಳಿಕೆಗಳು ಪ್ರಕರಣದ ಮುಂದಿನ ಬೆಳವಣಿಗೆಗಳ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ.




One Comment