25 ವರ್ಷಗಳ ಹಳೆಯ ಸಾಲ ತೀರಿಸಲು ಕೇರಳದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿ!


ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕೆಂದು ಸಾಲ ಪಡೆದು, ಅದನ್ನು ಮರಳಿ ನೀಡದೆ ಸತಾಯಿಸುವವರೇ ಹೆಚ್ಚು. ಹಣ ಕೇಳಿದರೆ ಇಂದು-ನಾಳೆ ಎಂದು ದಿನ ದೂಡುವವರು, ಸಾಲದಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವವರು ನಮಗೆ ಎಲ್ಲೆಂದರಲ್ಲಿ ಸಿಗುತ್ತಾರೆ. ಆದರೆ, ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವ ವ್ಯಕ್ತಿಯೊಬ್ಬರು ತಾವು 25 ವರ್ಷಗಳ ಹಿಂದೆ ಪಡೆದಿದ್ದ ಸಾಲವನ್ನು ನಯಾಪೈಸೆ ಸಮೇತ ಮರಳಿ ಪಾವತಿಸಿದ್ದಾರೆ. ಅದೂ ಕೂಡ ಎಲ್ಲೋ ಇರುವ ಕೇರಳದಿಂದ ತೆಲಂಗಾಣದ ಜಗಿತ್ಯಾಲಕ್ಕೆ ಬಂದು ಸಾಲ ತೀರಿಸಿ, ತಮ್ಮ ಮನಸ್ಸಿನ ಭಾರ ಇಳಿಸಿಕೊಂಡಿದ್ದಾರೆ. ಇದು ಯಾವುದೋ ಸಿನಿಮಾದ ಕಥೆಯಲ್ಲ, ನಿಜವಾಗಿ ನಡೆದ ರೋಚಕ ಹಾಗೂ ಹೃದಯಸ್ಪರ್ಶಿ ಘಟನೆ!
ಅಸಲಿಗೆ ನಡೆದಿದ್ದೇನು?
ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಧರ್ಮಪುರಿ ಪಟ್ಟಣದ ನಿವಾಸಿ ಎಡ್ಲ ಲಚ್ಚಣ್ಣ ಎಂಬುವವರು 25 ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಅವರಿಗೆ ಕೇರಳದ ಪಾಲಕ್ಕಾಡ್ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಎಂಬುವವರ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಆತ್ಮೀಯ ಸ್ನೇಹಕ್ಕೆ ತಿರುಗಿತು. ಆ ದಿನಗಳಲ್ಲಿ ಇಸ್ಮಾಯಿಲ್‌ಗೆ ಹಣದ ತುರ್ತು ಅಗತ್ಯವಿದ್ದಾಗ, ಸ್ನೇಹಿತ ಲಚ್ಚಣ್ಣ ಅವರಿಂದ ಸ್ವಲ್ಪ ಹಣವನ್ನು ಸಾಲವಾಗಿ ಪಡೆದಿದ್ದರು. ಭಾರತಕ್ಕೆ ಮರಳಿದ ನಂತರ ಆ ಹಣವನ್ನು ವಾಪಸ್ ನೀಡುವುದಾಗಿ ಮಾತು ಕೊಟ್ಟಿದ್ದರು. ಆದರೆ, ಸ್ವದೇಶಕ್ಕೆ ಮರಳಿದ ನಂತರ ಕೆಲವು ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಇಸ್ಮಾಯಿಲ್ ತಕ್ಷಣವೇ ಸ್ನೇಹಿತನಿಗೆ ಹಣವನ್ನು ಮರಳಿ ನೀಡಲು ಸಾಧ್ಯವಾಗಲಿಲ್ಲ. ಹಾಗಂತ ಅವರು ತಾವು ಪಡೆದ ಸಾಲವನ್ನು ಮರೆಯಲಿಲ್ಲ. ಹೇಗಾದರೂ ಮಾಡಿ ತನ್ನ ಸ್ನೇಹಿತನ ಹಣವನ್ನು ತಲುಪಿಸಲೇಬೇಕು ಎಂದು ದೃಢವಾಗಿ ನಿರ್ಧರಿಸಿದರು. ಆದರೆ, ಭಾರತಕ್ಕೆ ಬಂದ ಇಸ್ಮಾಯಿಲ್ ಬಳಿ ಲಚ್ಚಣ್ಣ ಅವರ ಪೂರ್ಣ ವಿಳಾಸವಾಗಲಿ ಅಥವಾ ಮೊಬೈಲ್ ನಂಬರ್ ಆಗಲಿ ಇರಲಿಲ್ಲ. ಲಚ್ಚಣ್ಣ ಅವರ ಊರು ಜಗಿತ್ಯಾಲ ಜಿಲ್ಲೆಯ ‘ಧರ್ಮಪುರಿ’ ಎಂಬುದು ಮಾತ್ರ ನೆನಪಿತ್ತು. ಅದರ ಆಧಾರದ ಮೇಲೆ ಗೂಗಲ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದರು. ಅಲ್ಲಿ ಸಿಕ್ಕ ಮಾಹಿತಿಯನ್ನಿಟ್ಟುಕೊಂಡು ಕೊನೆಗೂ ತೆಲಂಗಾಣದ ಧರ್ಮಪುರಿ ಪಟ್ಟಣಕ್ಕೆ ಬಂದಿಳಿದರು.
25 ವರ್ಷಗಳ ನಂತರ ತೀರಿದ ಸಾಲ!
ತನಗೆ ಸಂಪೂರ್ಣ ಅಪರಿಚಿತವಾಗಿದ್ದ ತೆಲಂಗಾಣದ ಆ ಊರಿನಲ್ಲಿ ಜನರನ್ನು ವಿಚಾರಿಸುತ್ತಾ ಕೊನೆಗೂ ಲಚ್ಚಣ್ಣ ಅವರ ಮನೆಯನ್ನು ಇಸ್ಮಾಯಿಲ್ ಪತ್ತೆಹಚ್ಚಿದರು. ತಾವು 25 ವರ್ಷಗಳ ಹಿಂದೆ ಸೌದಿಯಲ್ಲಿ ಪಡೆದಿದ್ದ ಸಾಲವನ್ನು ತೀರಿಸಲು ಇಷ್ಟು ದೂರ ಬಂದಿರುವುದಾಗಿ ಹೇಳಿದಾಗ ಲಚ್ಚಣ್ಣ ಅವರ ಕುಟುಂಬಸ್ಥರು ಆಶ್ಚರ್ಯಚಕಿತರಾದರು. ಸದ್ಯ ಮತ್ತೆ ಗಲ್ಫ್ ದೇಶದಲ್ಲಿರುವ ಲಚ್ಚಣ್ಣ ಅವರಿಗೆ ತಕ್ಷಣವೇ ಫೋನ್ ಮಾಡಿ ವಿಷಯ ತಿಳಿಸಲಾಯಿತು. ತಾವು ಸಾಲ ಕೊಟ್ಟಿದ್ದ ವಿಷಯವನ್ನೇ ಮರೆತಿದ್ದ ಲಚ್ಚಣ್ಣ, ಹಳೆಯ ಸ್ನೇಹಿತನ ಧ್ವನಿ ಕೇಳಿ ತಕ್ಷಣ ಗುರುತಿಸಿದರು. ಇಬ್ಬರೂ ಹಳೆಯ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.
ಬಳಿಕ ಇಸ್ಮಾಯಿಲ್ ತಾವು ಸಾಲವಾಗಿ ಪಡೆದಿದ್ದ ₹25,000 ಹಣವನ್ನು ಲಚ್ಚಣ್ಣ ಅವರ ಕುಟುಂಬದವರಿಗೆ ಹಸ್ತಾಂತರಿಸಿದರು. ಇಷ್ಟು ವರ್ಷಗಳಿಂದ ಮನಸ್ಸಿನಲ್ಲಿದ್ದ ದೊಡ್ಡ ಸಾಲದ ಹೊರೆ ಇಂದಿಗೆ ಇಳಿಯಿತು ಎಂದು ಇಸ್ಮಾಯಿಲ್ ಕಣ್ಣೀರು ಹಾಕಿದರು. ಇಸ್ಮಾಯಿಲ್ ಅವರ ಈ ಪ್ರಾಮಾಣಿಕತೆ ಮತ್ತು ಸ್ನೇಹಪ್ರೇಮ ಇಂದು ಸಮಾಜಕ್ಕೆ ದೊಡ್ಡ ಆದರ್ಶವಾಗಿದೆ.



