ಡಿಕೆಗೆ ಕೌಂಟರ್ ಯಾರು?

ಅಂದ ಹಾಗೆ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಐದನೇ ಅಭ್ಯರ್ಥಿಯನ್ನಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸುವಾಗ ಸುರ್ಜೇವಾಲ ಸೇರಿದಂತೆ ಹಲ ನಾಯಕರು ಅಚ್ಚರಿ ವ್ಯಕ್ತಪಡಿಸಿದ್ದರು. ‘ಇವತ್ತು ಕಂಫರ್ಟಬಲ್ ಅಗಿ ನಮ್ಮ ನಾಲ್ಕು ಅಭ್ಯರ್ಥಿಗಳು ಗೆಲ್ಲಬಹುದು.ಆದರೆ ಐದನೇ ಅಭ್ಯರ್ಥಿಯ ಗೆಲುವಿಗೆ ಎಲ್ಲಿಂದ ಮತಗಳನ್ನು ತರುತ್ತೀರಿ?ಅಂತ ಅವರು ಕೇಳಿದಾಗ ನೋಡುತ್ತಿರಿ ಅಂತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಅಷ್ಟೇ ಅಲ್ಲ,ತಮ್ಮ ಕಾರ್ಯತಂತ್ರದ ವಿವರಗಳನ್ನು ಕೊನೆ ಘಳಿಗೆಯವರೆಗೆ ರಹಸ್ಯವಾಗಿಟ್ಟು ಧಿಘ್ಮೂಢರಾಗುವಂತೆ ಮಾಡಿದ್ದಾರೆ.ವಾಸ್ತವವಾಗಿ ಅವರ ಈ ತಂತ್ರಗಾರಿಕೆಯ ಶೈಲಿ ಕಾಂಗ್ರೆಸ್ ವರಿಷ್ಟರಿಗೆ ಎಷ್ಟು ಖುಷಿ ಮೂಡಿಸಿದೆಯೋ ಬಿಜೆಪಿ ಪಾಳಯಕ್ಕೆ ಅಷ್ಟೇ ಚಿಂತೆ ಮೂಡಿಸಿದೆ.ಅಂದ ಹಾಗೆ 1990 ರಲ್ಲಿ ವೀರೇಂದ್ರಪಾಟೀಲರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರಲ್ಲ? ಆ ಸಂದರ್ಭದಲ್ಲಿ ಬಂಗಾರಪ್ಪ ಮುಂದಿನ ಸಿಎಂ ಆಗಲಿ ಅಂತ ಡಿಕೆ ಒಂದು ಲೆವೆಲ್ಲಿನಲ್ಲಿ ಲಾಬಿ ಮಾಡಿದ್ದರು.ಅವತ್ತಿಗಿನ್ನೂ ಅವರಿಗೆ ಇಪ್ಪತ್ತೆಂಟು ವರ್ಷ.ಇಷ್ಟು ಚಿಕ್ಕ ವಯಸ್ಸಿನ ಯುವಕ ತಮ್ಮ ಪರವಾಗಿ ಲಾಬಿ ಮಾಡಿದ ರೀತಿಯಿಂದ ಖುಷಿಯಾಗಿದ್ದ ಬಂಗಾರಪ್ಪ ತಮ್ಮ ಸಂಪುಟದಲ್ಲಿ ಡಿಕೆ ಬಂಧೀಖಾನೆ ಮಂತ್ರಿಯಾಗುವಂತೆ ನೋಡಿಕೊಂಡಿದ್ದರು.1996 ರ ಹೊತ್ತಿಗೆ ಇಲ್ಲಿ ಜನತಾದಳ ಸರ್ಕಾರವಿತ್ತಲ್ಲ? ಆ ಸಂದರ್ಭದಲ್ಲಿ ರಾಜಕೀಯ ಅಜ್ಞಾತವಾಸದಲ್ಲಿದ್ದ ಎಸ್.ಎಂ.ಕೃಷ್ಣ ಅವರ ಮನೆಗೆ ಹೋದ ಡಿಕೆ:’ಸಾರ್,ಈಗ ರಾಜ್ಯಸಭೆಗೆ ಎಲೆಕ್ಷನ್ ಅನೌನ್ಸ್ ಅಗಿದೆ.ಕಾಂಹ್ರೆಸ್ಸಿನಿಂದ ನೀವು ಸ್ಪರ್ಧಿಸಿ’ಎಂದಿದ್ದರು.

ಆಗೆಲ್ಲ ಹೌಹಾರಿದ ಕೃಷ್ಣ ಅವರು:’ನೀವೇನು ತಮಾಷೆ ಮಾಡುತ್ತಿದ್ದೀರಾ? ನಮ್ಮ ಪಕ್ಷಕ್ಕಿರುವ ಮತಗಳು ಕಡಿಮೆ.ಹೀಗಿರುವಾಗ ಗೆಲುವಿನಕನಸು ಕಾಣಲು ಸಾಧ್ಯವೇ ಇಲ್ಲ’ಎಂದಿದ್ದರಂತೆ. ಅದರೆ ಪಟ್ಟು ಬಿಡದ ಡಿಕೆ ಪೆನ್ನು,ಪೇಪರು ಹಿಡಿದುಕೊಂಡು ತಮ್ಮ ರಣತಂತ್ರದ ವಿವರಗಳನ್ನು ದಾಖಲಿಸುತ್ತಾ ಹೋಗಿದ್ದಲ್ಲದೆ:ನೀವೀಗ ಒಂದು ಕೆಲಸ ಮಾಡಿದರೆ ಸಾಕು ಸಾರ್ ಎಂದಿದ್ದರು.ಅದೇನು ಅಂತ ಕೃಷ್ಣ ಕೇಳಿದರೆ:’ನೀವು ಪ್ರಧಾನಿ ಪಿ.ವಿ.ನರಸಿಂಹರಾಯರ ಮೂಲಕ ಮುಖ್ಯಮಂತ್ರಿ ದೇವೇಗೌಡರಿಗೆ ಫೋನು ಮಾಡಿಸಿ.’ಜನತಾದಳದ ಹೆಚ್ಚುವರಿ ಮತಗಳನ್ನು ಕಾಂಗ್ರೆಸ್ಸಿಗೆ ಕೊಡಿ ಅಂತ ಅವರು ಹೇಳಿದರೆ ದೇವೇಗೌಡರು ಇಲ್ಲ ಅನ್ನಲಾರರು’ಅಂದಿದ್ದಾರೆ.ಅದರ ಪ್ರಕಾರ ಹೆಜ್ಜೆ ಇಟ್ಟ ಕೃಷ್ಣ ಅವತ್ತು ದಳದ ಹೆಚ್ಚುವರಿ ಮತಗಳ ಬೆಂಬಲ ಪಡೆದು ರಾಜ್ಯಸಭೆ ಪ್ರವೇಶ ಮಾಡಿದ್ದರು.ಹೀಗೆ ತಾವು ರಾಜ್ಯಸಭೆ ಪ್ರವೇಶಿಸಲು ಕಾರಣರಾದ ಡಿ.ಕೆ.ಶಿವಕುಮಾರ್ ಅವರನ್ನು ಅವರು ಮರೆಯಲಿಲ್ಲ ಎಂಬುದು ಇತಿಹಾಸ.ಅರ್ಥಾತ್, ಇಂತಹ ರಣತಂತ್ರಗಳನ್ನು ಹೆಣೆಯುವುದರಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸುಧೀರ್ಘ ಅನುಭವವಿದೆ.ಇವತ್ತು ರಾಷ್ಟ್ರಮಟ್ಟದಲ್ಲಿ ಸುಸ್ತಾಗಿರುವ ಕಾಂಗ್ರೆಸ್ಸಿಗೆ ಇದು ಆಶಾದಾಯಕವಾಗಿ ಕಾಣಿಸುತ್ತಿದ್ದರೆ,ಬಿಜೆಪಿ ಪಾಳಯ ಚಿಂತೆಗೆ ಬಿದ್ದಿದೆ.ಯಾಕೆಂದರೆ ಈ ಹಿಂದೆ ಸಿದ್ಧರಾಮಯ್ಯ ಅವರಿದ್ದಾಗ ಮಾತ್ರವಲ್ಲ,ಈಗ ಡಿಕೆ ಬಂದ ನಂತರವೂ ಅದರ ಸಮಸ್ಯೆ ಹಾಗೇ ಮುಂದುವರಿದಿದೆ.ಅರ್ಥಾತ್,ತಮ್ಮ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕೌಂಟರ್ ಕೊಡಬಲ್ಲ ನಾಯಕ ಯಾರಿದ್ದಾರೆ?ಎಂಬುದು.ಅವರ ಈ ಚಿಂತೆಗೆ ಉತ್ತರ ಹುಡುಕುವ ಕೆಲಸ ಬಿಜೆಪಿ ವರಿಷ್ಟರಿಂದ ಅಗಬೇಕಿದೆ.
ಕೃಪೆ: ಅರ್.ಟಿ.ವಿಠ್ಠಲಮೂರ್ತಿ



