ಧರ್ಮಸ್ಥಳ ಪ್ರಕರಣ: ₹200 ಕೋಟಿ ಷಡ್ಯಂತ್ರ ಆರೋಪದ ಕೇಸ್ ಖುಲಾಸೆ!

ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರಕ್ಕೆ ಕಳಂಕ ತರಲು ಹೋರಾಟಗಾರರು ₹200 ಕೋಟಿ ಫಂಡಿಂಗ್ ಪಡೆದು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿ ಚಿನ್ನಯ್ಯ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಚಿನ್ನಯ್ಯ ಸಲ್ಲಿಸಿದ ಅರ್ಜಿಯು ಕಪೋಲಕಲ್ಪಿತ ಎಂದು ಪರಿಗಣಿಸಿರುವ ಹೈಕೋರ್ಟ್, ಅದನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ಅಲ್ಲದೆ, ಕಾನೂನು ವಿಧಿವಿಧಾನಗಳ ಪ್ರಕಾರ ಅರ್ಜಿದಾರ ಚಿನ್ನಯ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಕೂಡ ಚಿನ್ನಯ್ಯ ಅವರ ಆರೋಪಗಳನ್ನು ಆಕ್ಷೇಪಿಸಿದ್ದು, “ನಾವು ತನಿಖೆಯನ್ನು ಪೂರ್ಣಗೊಳಿಸಿ ಈಗಾಗಲೇ ವರದಿಯನ್ನು ಸಲ್ಲಿಸಿದ್ದೇವೆ” ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಚಿತ್ರದುರ್ಗದ ಹಿರಿಯ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ರಮಾ ನಾಗರಾಜ್ ಅವರ ಪರವಾಗಿ ನವದೆಹಲಿಯ ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್, ಸಹ ನ್ಯಾಯವಾದಿ ನಿತಿನ್, ಜಯಂತ್ ಟಿ ಅವರ ಪರವಾಗಿ ಖ್ಯಾತ ನ್ಯಾಯವಾದಿ ಬಾಲನ್ ತಂಡ ಪರಿಣಾಮಕಾರಿ ವಾದ ಮಂಡಿಸಿತು.
ಸಾಮಾಜಿಕ ಹೋರಾಟಗಳನ್ನು ಹತ್ತಿಕ್ಕಲು, ಹೋರಾಟಗಾರರನ್ನು ಹೆದರಿಸಲು ಮತ್ತು ವಸೂಲಿ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ರಮಾ ನಾಗರಾಜ್ ಪರ ವಕೀಲರು ವಾದಿಸಿದರು.
ನಟ ಪ್ರಕಾಶ್ ರಾಜ್, ರಮಾ ನಾಗರಾಜ್, ಮಹೇಶ್ ತಿಮರೋಡಿ, ಗಿರೀಶ್ ಮಟ್ಟನವರ್ ಹಾಗೂ ಜಯಂತ್ ಟಿ ವಿರುದ್ಧ ಮಾಡಲಾಗಿದ್ದ ₹200 ಕೋಟಿ ಷಡ್ಯಂತ್ರದ ಆರೋಪಗಳು ಸುಳ್ಳು ಮತ್ತು ಹೋರಾಟಗಾರರನ್ನು ಮಾನಸಿಕವಾಗಿ ಕುಗ್ಗಿಸಲು ಮಾಡಿದ ಕುತಂತ್ರ ಎಂಬುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ.



