ಮನೆಯ ಕೀ ಕಳೆದುಹೋದದ್ದೇ ಕಳ್ಳರಿಗೆ ವರ! ಬೀಗ ಮುರಿದು ₹2.65 ಲಕ್ಷ ಮೌಲ್ಯದ ಚಿನ್ನ-ನಗದು ದೋಚಿದ ಖದೀಮರು!


ಮನೆಯ ಕೀ ಕಳೆದುಹೋದ ಘಟನೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಮನೆಗೆ ನುಗ್ಗಿ ₹45 ಸಾವಿರ ನಗದು ಹಾಗೂ ₹2.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹಾಸನದ ಗುಡ್ಡೇನಹಳ್ಳಿಕೊಪ್ಪಲಿನಲ್ಲಿ ನಡೆದಿದೆ.
ಗುಡ್ಡೇನಹಳ್ಳಿಕೊಪ್ಪಲಿನ ನಿವಾಸಿ ಸಮ ಸುಲ್ತಾನ ಅವರು ಜೂನ್ 24ರಂದು ಸಂಜೆ ಮನೆಗೆ ಬೀಗ ಹಾಕಿ ತವರು ಮನೆಗೆ ತೆರಳಿದ್ದರು. ಜೂನ್ 29ರಂದು ಬೆಳಿಗ್ಗೆ ಮನೆಗೆ ಮರಳಿದಾಗ ಬೀಗ ತೆರೆದು, ಬೀರುವಿನ ಲಾಕರ್ ಮುರಿದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಬೀರುವಿನಲ್ಲಿದ್ದ ಸುಮಾರು 22 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಹಾಗೂ ₹45,000 ನಗದು ದೋಚಿ ಪರಾರಿಯಾಗಿದ್ದಾರೆ. ಕಳುವಾದ ಚಿನ್ನಾಭರಣದ ಮೌಲ್ಯ ಸುಮಾರು ₹2.20 ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಗೆ ಮತ್ತಷ್ಟು ಕುತೂಹಲಕಾರಿ ತಿರುವು ಸಿಕ್ಕಿದ್ದು, ಸುಮಾರು 8–10 ದಿನಗಳ ಹಿಂದೆ ಮನೆಯ ಅಸಲಿ ಕೀ ಕಳೆದುಹೋಗಿತ್ತು. ಬಳಿಕ ಹೊಸ ಕೀ ಮಾಡಿಸಿಕೊಂಡಿದ್ದ ಕುಟುಂಬ, ಕಳೆದುಹೋದ ಹಳೆಯ ಕೀಯನ್ನೇ ಬಳಸಿಕೊಂಡು ಕಳ್ಳರು ಮುಂಭಾಗಿಲು ತೆರೆದು ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೆನ್ನನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.



