ಹರಳಯ್ಯ ಮಠದ ಸ್ವಾಮೀಜಿ ಮೇಲೆ ಹಲ್ಲೆ; ಪೊಲೀಸ್ ಠಾಣೆಯಲ್ಲೂ ದಾಂಧಲೆ ನಡೆಸಿದ ಆರೋಪ!

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ಶಿವಶರಣ ಹರಳಯ್ಯ ಮಠದ ಪೀಠಾಧಿಪತಿ ಬಸವ ಹರಳಯ್ಯ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಮಠದ ಶಾಲಾ ಬಸ್ ಚಾಲಕನ ಮೇಲೂ ಹಲ್ಲೆ ನಡೆದಿದ್ದು, ಇಬ್ಬರೂ ಗಾಯಗೊಂಡು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಠದ ಪ್ರವೇಶ ದ್ವಾರಕ್ಕೆ ಸಂಬಂಧಿಸಿದ ಜಾಗದ ವಿವಾದವನ್ನು ಹಿನ್ನೆಲೆಯಾಗಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮಠ ಹಾಗೂ ಸ್ಥಳೀಯ ನಿವಾಸಿ ಸಿದ್ದೇಶ್ವರ್ ಅವರ ಕುಟುಂಬದ ನಡುವೆ ಈ ಜಾಗದ ವಿಚಾರವಾಗಿ ಹಲವು ದಿನಗಳಿಂದ ಭಿನ್ನಾಭಿಪ್ರಾಯವಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎನ್ನಲಾಗಿದೆ.

ಆರೋಪದ ಪ್ರಕಾರ, ತಡರಾತ್ರಿ ಸಿದ್ದೇಶ್ವರ್ ಮತ್ತು ಇತರರು ಮಠದ ಆವರಣಕ್ಕೆ ಪ್ರವೇಶಿಸಿ ಜಾಗದ ವಿಚಾರವಾಗಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ರಕ್ಷಿಸಲು ಬಂದ ಮಠದ ಶಾಲಾ ಬಸ್ ಚಾಲಕ ಭೀಮರಾಜ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ. ಅಲ್ಲದೆ, ಸ್ವಾಮೀಜಿಗೆ ಪ್ರಾಣ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಹಲ್ಲೆಯ ನಂತರ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದ ಸ್ವಾಮೀಜಿಯನ್ನು ಆರೋಪಿಗಳು ಬೆನ್ನಟ್ಟಿಕೊಂಡು ಠಾಣೆಯೊಳಗೂ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ಸಮ್ಮುಖದಲ್ಲೇ ಸ್ವಾಮೀಜಿಯ ಎದೆಗೆ ಒದ್ದು ಹಲ್ಲೆ ನಡೆಸಿದ್ದು, ಠಾಣೆಯಲ್ಲಿದ್ದ ಕುರ್ಚಿಗಳನ್ನು ಹಾನಿಗೊಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಗಾಯಗೊಂಡ ಸ್ವಾಮೀಜಿ ಹಾಗೂ ಚಾಲಕ ಭೀಮರಾಜ್ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಐಮಂಗಲ ಠಾಣೆಯ ಸಿಪಿಐ ಗುಡ್ಡಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಳಯ್ಯ ಸ್ವಾಮೀಜಿ, ಮಠದ ಜಾಗದ ವಿವಾದದ ಕುರಿತು ಈ ಹಿಂದೆಯೂ ದೂರು ನೀಡಿದ್ದರೂ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯೊಳಗೇ ತಮ್ಮ ಮೇಲೆ ಹಲ್ಲೆ ನಡೆದಿರುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ಘಟನೆ ಎಂದು ಹೇಳಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಐಮಂಗಲ ಪೊಲೀಸರು ತನಿಖೆ ಮುಂದುವರಿಸಿದ್ದು, ಎಲ್ಲಾ ಆರೋಪಗಳ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.



