ಕ್ರೈಮ್

ಅಪಘಾತ ಅಲ್ಲ, ಅದು ಪಕ್ಕಾ ಪ್ಲಾನ್ಡ್ ಮರ್ಡರ್! ಒಂದೂವರೆ ತಿಂಗಳ ಬಳಿಕ ಹೆಡೆಮುರಿ ಕಟ್ಟಿದ ಕಡೂರು ಪೊಲೀಸರು!

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ವಾಹನ, ಅದರ ಪಕ್ಕದಲ್ಲೇ ರಕ್ತಸಿಕ್ರತವಾಗಿ ಬಿದ್ದಿದ್ದ ಯುವಕನ ಶವ! ಮೇಲ್ನೋಟಕ್ಕೆ ಇದು ಯಾರಿಗೇ ಆದರೂ ಭೀಕರ ರಸ್ತೆ ಅಪಘಾತ ಅಂತಾನೇ ಅನಿಸೋದು. ಕುಟುಂಬಸ್ಥರೂ ಕೂಡ ವಿಧಿಯಾಟ ಅಂತ ಕಣ್ಣೀರು ಹಾಕುತ್ತಾ ಅಂದುಕೊಂಡಿದ್ದು ಅದನ್ನೇ. ಆದರೆ, ಆಸ್ಪತ್ರೆಯಿಂದ ಬಂದ ಆ ಒಂದು ರಿಪೋರ್ಟ್ ಇಡೀ ಕೇಸ್‌ನ ಕಥೆಯನ್ನೇ ಬದಲಿಸಿಬಿಡ್ತು!

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆಕ್ಸಿಡೆಂಟ್ ನಾಟಕದ ಹಿಂದಿದ್ದ ಆ ರೋಚಕ ‘ಸ್ನೇಹದ್ರೋಹ’ದ ಕಥೆ ಇಲ್ಲಿದೆ ನೋಡಿ.

ಏನಿದು ಘಟನೆ?

ಹಾಸನದ ವಿಜಯನಗರದ ನಿವಾಸಿ ಯಶವಂತ್ (26) ತಾನು ಮಾರಾಟ ಮಾಡಿದ್ದ ಕಾರಿನ ಬಾಕಿ EMI ಹಣ ಕ್ಲಿಯರ್ ಮಾಡಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರಕ್ಕೆ ಹೋಗಿದ್ದ. ಅಂದು ರಾತ್ರಿಯಾದರೂ ಮನೆಗೆ ಬರದಿದ್ದಾಗ ಆತಂಕಗೊಂಡಿದ್ದ ಕುಟುಂಬಸ್ಥರಿಗೆ ಆಂಬ್ಯುಲೆನ್ಸ್ ಚಾಲಕನಿಂದ ಕರೆ ಬಂದಿತ್ತು. “ನಿಮ್ಮ ಹುಡುಗನಿಗೆ ಹಿರೇಗೌಜ ಬಳಿ ಆಕ್ಸಿಡೆಂಟ್ ಆಗಿದೆ” ಅನ್ನೋ ಸುದ್ದಿ ಕೇಳಿ ಧಾವಿಸಿ ಬಂದ ಕುಟುಂಬಸ್ಥರಿಗೆ ಯಶವಂತ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಗೂಡ್ಸ್ ವಾಹನವೇ ಡಿಕ್ಕಿ ಹೊಡೆದಿರಬೇಕು ಎಂದು ಭಾವಿಸಿ, ಅದರ ಚಾಲಕನ ವಿರುದ್ಧವೇ ದೂರು ನೀಡಿದ್ದರು.

ಟ್ವಿಸ್ಟ್ ಕೊಟ್ಟ ‘ಪೋಸ್ಟ್ ಮಾರ್ಟಂ’ ರಿಪೋರ್ಟ್!

ಪೊಲೀಸರು ವಿಚಾರಣೆ ನಡೆಸಿದಾಗ ಗೂಡ್ಸ್ ವಾಹನದ ಚಾಲಕ ನೀಡಿದ ಹೇಳಿಕೆ ಅನುಮಾನ ಮೂಡಿಸಿತ್ತು. ಇದರ ಮಧ್ಯೆ ಬಂದ ಪೋಸ್ಟ್ ಮಾರ್ಟಂ (Post-Mortem) ರಿಪೋರ್ಟ್ ಪೊಲೀಸರ ಕಣ್ಣು ತೆಗೆಸಿತು! ಯಶವಂತ್ ಮೈಮೇಲಿದ್ದ ಗಾಯಗಳು ಅಪಘಾತದಿಂದ ಆದದ್ದಲ್ಲ, ಬದಲಿಗೆ ಯಾರೋ ಚುಚ್ಚಿ ಕೊಂದಿರೋ ಸುಳಿವು ಸಿಕ್ಕಿತ್ತು. ಕೂಡಲೇ ರಂಗಕ್ಕಿಳಿದ ಕಡೂರು ಇನ್ಸ್ಪೆಕ್ಟರ್ ರಫೀಕ್ ಮತ್ತು ತಂಡ, ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿತು.

ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕ ಆ ಒಂದು ಸುಳಿವು!

ಯಶವಂತ್ ಅಜ್ಜಂಪುರಕ್ಕೆ ಹೋಗುವಾಗ ತನ್ನ ಆಪ್ತ ಸ್ನೇಹಿತ ಸಚಿನ್ ಎಂಬುವವನನ್ನು ಜೊತೆಗೆ ಕರೆದುಕೊಂಡು ಹೋಗಿದ್ದ ಎಂಬ ವಿಷಯ ಬಯಲಾಯ್ತು. ಪೊಲೀಸರು ಸಚಿನ್‌ನನ್ನು ವಿಚಾರಿಸಿದಾಗ “ನನಗೇನೂ ಗೊತ್ತಿಲ್ಲ” ಎಂದು ನಾಟಕವಾಡಿದ್ದ. ಆದರೆ, ಚಿಕ್ಕಮಗಳೂರು ಮತ್ತು ಸಖರಾಯಪಟ್ಟಣದ ಸಿಸಿಟಿವಿ (CCTV) ಫೂಟೇಜ್ ಪರಿಶೀಲಿಸಿದಾಗ, ಬೈಕ್‌ನಲ್ಲಿ ಹೋಗುವಾಗ ಇಬ್ಬರಿದ್ದವರು, ವಾಪಸ್ ಬರುವಾಗ ಸಚಿನ್ ಒಬ್ಬನೇ ಬರ್ತಿರೋದು ಕನ್ಫರ್ಮ್ ಆಯ್ತು! ಖಾಕಿ ಪಡೆ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಹಂತಕ ಸಚಿನ್ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

ಮದ್ಯದ ಅಮಲಿನಲ್ಲಿ ನಡೆದಿದ್ದೇನು?

ಜೂನ್ 12ರ ರಾತ್ರಿ ಕಾರಿನ ಬಾಕಿ ಹಣ 70 ಸಾವಿರ ರೂ. ಚೆಕ್ ಪಡೆದು ಇಬ್ಬರೂ ಬೈಕ್‌ನಲ್ಲಿ ವಾಪಸ್ ಬರುವಾಗ ಬಾರ್ ಒಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ಹಿರೇಗೌಜ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದಾಗ ಹಣದ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮದ್ಯದ ಕಿಕ್‌ನಲ್ಲಿದ್ದ ಸಚಿನ್, ಬೈಕ್ ಟೂಲ್ಸ್ ಬಾಕ್ಸ್‌ನಲ್ಲಿದ್ದ ಸ್ಕ್ರೂ ಡ್ರೈವರ್‌ ನಿಂದ ಯಶವಂತ್ ಕಾಲು ಮತ್ತು ತೊಡೆಯ ಭಾಗಕ್ಕೆ ಚುಚ್ಚಿ, ಹೈವೇ ರಸ್ತೆಗೆ ಹಾಕಿ ಭೀಕರವಾಗಿ ತುಳಿದು ಕೊಲೆ ಮಾಡಿದ್ದಾನೆ! ಇದೇ ವೇಳೆ ರಸ್ತೆಯಲ್ಲಿ ಬಂದ ಗೂಡ್ಸ್ ವಾಹನದ ಚಾಲಕ, ರಸ್ತೆಯಲ್ಲಿ ಬಿದ್ದಿದ್ದ ಶವದ ಮೇಲೆ ಗಾಡಿ ಹತ್ತುವುದನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿಯಾಗಿತ್ತು!

ಸ್ನೇಹಿತನನ್ನೇ ಕೊಂದವ ಕೊನೆಗೂ ಲಾಕ್!

ತನ್ನದೇ ಸ್ನೇಹಿತನನ್ನು ಕೊಂದು, ಕಥೆ ಕಟ್ಟಿ, ಏನೂ ತಿಳಿಯದವನಂತೆ ಮೆರೆಯುತ್ತಿದ್ದ ಹಂತಕ ಸಚಿನ್, ಒಂದೂವರೆ ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದುೀಗ ಜೈಲು ಪಾಲಾಗಿದ್ದಾನೆ. ಸಣ್ಣ ಸುಳಿವೂ ಬಿಡದೆ ಅಪಘಾತ ಎಂದು ಬಿಂಬಿತವಾಗಿದ್ದ ಕೊಲೆ ಪ್ರಕರಣವನ್ನು ಅತ್ಯಂತ ರೋಚಕವಾಗಿ ಭೇದಿಸಿದ ಕಡೂರು ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker