ಪವರ್ ಟಿವಿ ಪ್ರಕರಣಕ್ಕೆ ಹೊಸ ತಿರುವು: ರಾಕೇಶ್ ಶೆಟ್ಟಿ ವಿರುದ್ಧ ಗಂಭೀರ ಆರೋಪ

ಬೆಂಗಳೂರು: ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರ ಸೂಚನೆಯ ಮೇರೆಗೆ ರೆಕಾರ್ಡ್ ಮಾಡಲಾಗಿದ್ದ ಸ್ಟಿಂಗ್ ವೀಡಿಯೊಗಳನ್ನು ಹೊಂದಿದ್ದ ಎನ್ನಲಾದ ಚಾನಲ್ನ ನೌಕರರೊಬ್ಬರು 2024ರಲ್ಲಿ ಚಾನಲ್ ಕಚೇರಿಯಲ್ಲಿ ಅಸಹಜ ಸಂದರ್ಭಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು blrpost.com ಜತೆ ಮಾತನಾಡಿದ ವಿಜಿಲ್ ಬ್ಲೋವರ್ (ಮಾಹಿತಿದಾರರು) ಬಹಿರಂಗಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ವರದಿ (UDR) ದಾಖಲಿಸಲಾಗಿದೆ.
ಆದರೆ, ಸರಿಯಾದ ತನಿಖೆ ನಡೆಸದೆ ಪೊಲೀಸರು ಪ್ರಕರಣವನ್ನು ಮುಚ್ಚಿದ್ದಾರೆ ಎಂದು ಆರೋಪಿಸಿರುವ ವಿಜಿಲ್ ಬ್ಲೋವರ್, ಈ ಪ್ರಕರಣವನ್ನು ಮರುತೆರೆಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೃತ ನೌಕರನನ್ನು ‘ವಿಕ್ಕಿ’ ಎಂದು ಗುರುತಿಸಲಾಗಿದ್ದು, ಲಿಫ್ಟ್ ತಾಂತ್ರಿಕ ದೋಷದಿಂದ ಕೆಳಗೆ ಬಿದ್ದು ಅವರು ಮೃತಪಟ್ಟಿರುವುದಾಗಿ ರಾಕೇಶ್ ಶೆಟ್ಟಿ ಮತ್ತು ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಆದರೆ ಈ ವಿವರಣೆಯನ್ನು ಪ್ರಶ್ನಿಸಿರುವ ವಿಜಿಲ್ ಬ್ಲೋವರ್, “ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯ ಲಿಫ್ಟಿಂದ ಒಬ್ಬ ವ್ಯಕ್ತಿ ಹೇಗೆ ಬೀಳಲು ಸಾಧ್ಯ? ಲಿಫ್ಟ್ ಇದ್ದಕ್ಕಿದ್ದಂತೆ ಹೇಗೆ ಕೆಟ್ಟುಹೋಯಿತು?” ಎಂದು ಪ್ರಶ್ನಿಸಿದ್ದು, ವಿಕ್ಕಿಯ ಸಾವಿನ ಸುತ್ತಲಿನ ಪರಿಸ್ಥಿತಿಗಳು ಅನುಮಾನಾಸ್ಪದವಾಗಿವೆ ಎಂದು ಆರೋಪಿಸಿದ್ದಾರೆ.
https://www.facebook.com/100063982875754/videos/2764672063979096
ರಾಕೇಶ್ ಶೆಟ್ಟಿ ಅವರ ಸೂಚನೆಯಂತೆ ವಿಕ್ಕಿ ಬಳಿ ಸ್ಟಿಂಗ್ ವೀಡಿಯೊಗಳಿದ್ದವು ಮತ್ತು ಆತ ಸಾವಿಗೂ ಮುನ್ನ ಅಂತಹ ಒಂದು ವೀಡಿಯೊವನ್ನು ಹಸ್ತಾಂತರಿಸಿದ್ದ ಎಂದು ವಿಜಿಲ್ ಬ್ಲೋವರ್ ತಿಳಿಸಿದ್ದಾರೆ. “ವಿಕ್ಕಿ ಬಳಿ ಸ್ಟಿಂಗ್ ವೀಡಿಯೊಗಳಿದ್ದುದೇ ಈ ಸಾವನ್ನು ಇನ್ನಷ್ಟು ಅನುಮಾನಾಸ್ಪದವಾಗಿಸಿದೆ. ಅದರಲ್ಲಿ ಒಂದು ವೀಡಿಯೊವನ್ನು ನನಗೆ ನೀಡಲಾಗಿತ್ತು” ಎಂದು ವಿಜಿಲ್ ಬ್ಲೋವರ್ blrpost.com ಗೆ ತಿಳಿಸಿದ್ದಾರೆ. ನಂತರ ಈ ವೀಡಿಯೊವನ್ನು ಕರ್ನಾಟಕ ಹೈಕೋರ್ಟ್ನ ವಿಜಿಲೆನ್ಸ್ ವಿಭಾಗಕ್ಕೆ ಸಲ್ಲಿಸಲಾಗಿದ್ದು, ಈ ಕುರಿತು ದೂರು ಕೂಡ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ವೀಡಿಯೊ ತಮ್ಮ ಬಳಿ ಇರುವುದು ತಿಳಿದು ರಾಕೇಶ್ ಶೆಟ್ಟಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ವಿಜಿಲ್ ಬ್ಲೋವರ್ ದೂರಿದ್ದಾರೆ. “ವಿಕ್ಕಿಗೆ ಗತಿಯೇ ನನಗೂ ಒದಗುತ್ತದೆ ಎಂದು ರಾಕೇಶ್ ಶೆಟ್ಟಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವಿಜಿಲೆನ್ಸ್ ವಿಭಾಗಕ್ಕೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದೇನೆ” ಎಂದಿದ್ದಾರೆ.
ಇದಲ್ಲದೆ, ನೌಕರನ ಸಾವಿನ ಬಳಿಕ ಪ್ರಕರಣವನ್ನು ಮುಂದುವರಿಸದಿರಲು ರಾಕೇಶ್ ಶೆಟ್ಟಿ ಅವರು ವಿಕ್ಕಿಯ ಪತ್ನಿಗೆ ಹಣ ನೀಡಿದ್ದಾರೆ ಎಂದು ವಿಜಿಲ್ ಬ್ಲೋವರ್ ಗಂಭೀರ ಆರೋಪ ಮಾಡಿದ್ದಾರೆ. ವಿಕ್ಕಿಯ ಪತ್ನಿ ಹಣ ಪಡೆದಿರುವುದನ್ನು ಒಪ್ಪಿಕೊಂಡಿರುವ ಆಡಿಯೋ ರೆಕಾರ್ಡಿಂಗ್ ಒಂದನ್ನು blrpost.com ಹೊಂದಿದೆ ಎನ್ನಲಾಗಿದ್ದು, ಈ ಹಣ ಸಂದಾಯದ ಹಿಂದಿನ ಪರಿಸ್ಥಿತಿ ಮತ್ತು ಉದ್ದೇಶದ ಬಗ್ಗೆ ಸ್ವತಂತ್ರವಾಗಿ ತನಿಖೆಯಾಗಬೇಕಿದೆ.



