ಆನ್ಲೈನ್ ಬೆಟ್ಟಿಂಗ್ ಹುಚ್ಚು: ನೆರೆಮನೆಯ ವೃದ್ಧೆಯನ್ನೇ ಕೊಂ* ಸೂಟ್ಕೇಸ್ನಲ್ಲಿ ಎಸೆದ ಪಾಪಿ!



ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿ ಕೆರೆಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ವೃದ್ಧೆಯ ಮೃತದೇಹದ ರಹಸ್ಯ ಕೊನೆಗೂ ಹೊರಬಿದ್ದಿದೆ. ಕೆರೆಯಲ್ಲಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ 65 ವರ್ಷದ ಜಯಮ್ಮ ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಕುಂಬಳಗೋಡು ಪೊಲೀಸರು, ಅಸಲಿ ಹಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆಯ ವೇಳೆ ಪೊಲೀಸರಿಗೇ ಶಾಕ್ ಕಾದಿತ್ತು! ಏಕೆಂದರೆ ಜಯಮ್ಮನ ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ, ಅವರ ಪಕ್ಕದ ಮನೆಯ ಗಗನ್ ಎಂಬಾತ!
ಬೆಟ್ಟಿಂಗ್ ಸಾಲವೇ ಕೊಲೆಗೆ ಕಾರಣ!
ಗಗನ್ ಆನ್ಲೈನ್ ಬೆಟ್ಟಿಂಗ್ಗೆ ಸಂಪೂರ್ಣ ದಾಸನಾಗಿದ್ದ. ಬೆಟ್ಟಿಂಗ್ ಹುಚ್ಚಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಈತನಿಗೆ ಸಾಲ ತೀರಿಸಲು ಯಾವುದೇ ದಾರಿ ಕಾಣುತ್ತಿರಲಿಲ್ಲ. ಕೊನೆಗೆ ತನ್ನ ಸಾಲ ತೀರಿಸಲು ಆಯ್ಕೆ ಮಾಡಿಕೊಂಡಿದ್ದು ಪಕ್ಕದ ಮನೆಯ ನಿರಪರಾಧಿ ವೃದ್ಧೆಯನ್ನು!
ಫೋನ್ ಕರೆ ಕೇಳಲು ಬಂದವಳ ಉಸಿರುಗಟ್ಟಿಸಿದ ಕಿರಾತಕ!
ಅದು ಜುಲೈ 15ರ ಸಂಜೆ. ಜಯಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲ. ತುರ್ತಾಗಿ ಯಾರಿಗೋ ಕರೆ ಮಾಡಬೇಕಿದ್ದರಿಂದ ನೆರೆಮನೆಯ ಗಗನ್ ಬಳಿ ಹೋಗಿ, “ಒಂದು ಕಾಲ್ ಮಾಡಬೇಕು, ಫೋನ್ ಕೊಡಪ್ಪ” ಎಂದು ಕೇಳಿದ್ದಾರೆ. ಆದರೆ, ಕರೆ ಮಾಡಲು ಬಂದ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಂಡ ತಕ್ಷಣ ಗಗನ್ನ ಬುದ್ಧಿ ಕೆಟ್ಟಿತ್ತು. ತನ್ನ ಬೆಟ್ಟಿಂಗ್ ಸಾಲ ತೀರಿಸಲು ಇದೇ ಸರಿಯಾದ ಸಮಯ ಎಂದು ಸ್ಕೆಚ್ ಹಾಕಿದ ಈತ, ವೃದ್ಧೆಯನ್ನು ಮನೆಯೊಳಗೆ ಕರೆದು ಕ್ಷಣಮಾತ್ರದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅವರ ಮೈಮೇಲಿದ್ದ ಎಲ್ಲಾ ಒಡವೆಗಳನ್ನು ದೋಚಿದ್ದಾನೆ.
ಸಿನಿಮಾ ಶೈಲಿಯಲ್ಲಿ ಹೆಣ ಸಾಗಾಟ.. ಆಮೇಲೆ ನಾಟಕ!
ಕೊಲೆಯ ನಂತರ ಸಾಕ್ಷಿ ನಾಶ ಮಾಡಲು ಗಗನ್ ಪಕ್ಕಾ ಸಿನಿಮಾ ಶೈಲಿಯಲ್ಲಿ ಯೋಜನೆ ರೂಪಿಸಿದ್ದ: ಹಗಲು ಹೊತ್ತಿನಲ್ಲೇ ವೃದ್ಧೆಯ ಮೃತದೇಹವನ್ನು ದೊಡ್ಡ ಸೂಟ್ಕೇಸ್ನಲ್ಲಿ ತುಂಬಿದ. ಯಾರಿಗೂ ಅನುಮಾನ ಬಾರದಂತೆ ಆಟೋ ಬುಕ್ ಮಾಡಿ, ರಾಮೋಹಳ್ಳಿ ಕೆರೆಗೆ ಸೂಟ್ಕೇಸ್ ಎಸೆದು ಎಸ್ಕೇಪ್ ಆದ. ಇಷ್ಟಕ್ಕೇ ನಿಲ್ಲದ ಈತ, ತನ್ನ ಮೇಲೆ ಅನುಮಾನ ಬರಬಾರದು ಎಂದು ಜಯಮ್ಮನ ಕುಟುಂಬಸ್ಥರು ಹುಡುಕಾಟ ನಡೆಸುವಾಗ ತಾನೇ ಮುಂಚೂಣಿಯಲ್ಲಿ ನಿಂತು ಹುಡುಕುವಂತೆ ನಾಟಕ ಆಡಿದ್ದ!
ಪೊಲೀಸರ ಸೈಲೆಂಟ್ ಕಾರ್ಯಾಚರಣೆಗೆ ಅಸಲಿ ಬಣ್ಣ ಬಯಲು!
ಆರಂಭದಲ್ಲಿ ಯಾವುದೇ ಸುಳಿವು ಸಿಗದಿದ್ದರೂ, ಕುಂಬಳಗೋಡು ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ತನಿಖೆ ನಡೆಸಿದಾಗ ಗಗನ್ ಮೇಲೆ ಅನುಮಾನ ವ್ಯಕ್ತವಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪೊಲೀಸರ ಖಡಕ್ ಪ್ರಶ್ನೆಗಳಿಗೆ ಹೆದರಿ ಸಂಪೂರ್ಣ ಸತ್ಯವನ್ನು ಕಕ್ಕಿದ್ದಾನೆ. ಸದ್ಯ ಕುಂಬಳಗೋಡು ಪೊಲೀಸರು ಆರೋಪಿ ಗಗನ್ನನ್ನು ಬಂಧಿಸಿದ್ದು, ಆತ ಕದ್ದಿದ್ದ ಚಿನ್ನಾಭರಣಗಳನ್ನು ರಿಕವರಿ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಆನ್ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ವೃದ್ಧೆಯನ್ನು ಬಲಿ ಪಡೆದ ಈ ಪಾಪಿಯ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



