ಅಮ್ಮ ನನ್ನನ್ನು ಕ್ಷಮಿಸು; ಇನ್ಸ್ಟಾಗ್ರಾಂನಲ್ಲಿ ಹುಟ್ಟಿದ ಪ್ರೀತಿ, ಮದುವೆಯಾಗಿ ನಾಲ್ಕೇ ತಿಂಗಳಿಗೆ ದುರಂತ ಅಂತ್ಯಕಂಡ ಶಿಕ್ಷಕಿ..!



ಅಪ್ಪ-ಅಮ್ಮ ಮಕ್ಕಳಿಗೆ ಬುದ್ಧಿ ಹೇಳುವಾಗ ನಮ್ಮ ಒಳಿತಿಗೆ ಹೇಳ್ತಿದ್ದಾರೆ ಅನ್ನೋದು ಹಲವರಿಗೆ ಅರ್ಥ ಆಗೋದಿಲ್ಲ. ನಮ್ಮ ಸಂತೋಷಕ್ಕೆ ಕಲ್ಲು ಹಾಕ್ತಿದ್ದಾರೆ ಅನ್ಸುತ್ತೆ, ಹೆತ್ತವರೇ ಶತ್ರುಗಳಂತೆ ಕಾಣುತ್ತಾರೆ. ಆದರೆ, ಕಾಲ ಮಿಂಚಿ ಹೋದ ಮೇಲೆ ತಪ್ಪು ಅರಿವಾದರೆ ಏನು ಪ್ರಯೋಜನ? ಇಲ್ಲೊಂದು ಇನ್ಸ್ಟಾಗ್ರಾಂ ಪ್ರೀತಿಯ ಕಥೆ ಹೆತ್ತವರ ಮಾತು ಮೀರಿದ ಯುವತಿಯ ಬಾಳಿನಲ್ಲಿ ಘೋರ ದುರಂತ ತಂದಿಟ್ಟಿದೆ.
ಇನ್ಸ್ಟಾಗ್ರಾಂ ಪರಿಚಯ, ಹೆತ್ತವರ ವಿರೋಧದ ನಡುವೆ ಮದುವೆ!
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಮೂಲದ 25 ವರ್ಷದ ಶ್ವೇತಾ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ಇನ್ಸ್ಟಾಗ್ರಾಂ ಮೂಲಕ ತುಮಕೂರು ಜಿಲ್ಲೆ ಕುಣಿಗಲ್ ಮೂಲದ ಮೂರ್ತಿ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಯುವತಿಯ ಕುಟುಂಬಸ್ಥರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೆತ್ತವರ ವಿರೋಧದ ನಡುವೆಯೂ ಶ್ವೇತಾ, ಮೂರ್ತಿ ಜೊತೆ ಬೆಂಗಳೂರಿನ ಕಮಲಾನಗರದ ದೇವಸ್ಥಾನವೊಂದರಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದಳು.
ತಿಂಗಳಲ್ಲೇ ಬದಲಾದ ಸಂಸಾರ: ಶುರುವಾಯ್ತು ಅಸಲಿ ಟಾರ್ಚರ್!
ಮದುವೆಯಾಗಿ ಹೆಗ್ಗನಹಳ್ಳಿ ಕ್ರಾಸ್ನ ಲಕ್ಷ್ಮಣ ನಗರದಲ್ಲಿ ವಾಸವಿದ್ದ ಈ ದಂಪತಿಗಳ ಸಂಸಾರ ಕೇವಲ ಒಂದು ತಿಂಗಳಷ್ಟೇ ಚೆನ್ನಾಗಿತ್ತು. ಆನಂತರ ಶ್ವೇತಾ ಪಾಲಿಗೆ ಸಂಸಾರ ನರಕವಾಗಿ ಬದಲಾಗಿತ್ತು. ಗಂಡ ಮೂರ್ತಿ ಹಾಗೂ ಆತನ ಅಕ್ಕ ಸೇರಿಕೊಂಡು ಹಣ ಮತ್ತು ಆಸ್ತಿಗಾಗಿ ಶ್ವೇತಾಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ಪ್ರೀತಿಸಿ ಓಡಿ ಬಂದು ಮದುವೆ ಆಗಿದ್ದರಿಂದ ಶ್ವೇತಾಗೆ ತವರಿನ ಬಾಗಿಲು ಕೂಡ ಬಂದ್ ಆಗಿತ್ತು.
”ಟಾರ್ಚರ್ ಜಾಸ್ತಿ ಆಗಿದ್ರೆ ಪಿಜಿಯಲ್ಲಿ ಉಳಿದುಕೋ” ಎಂದಿದ್ದ ತಾಯಿ
ಮಗಳ ಕಷ್ಟ ಅರಿತ ತಾಯಿ, “ಕಿರುಕುಳ ತಡೆಯಲು ಸಾಧ್ಯವಾಗದಿದ್ದರೆ ಯಾವುದಾದರೂ ಪಿಜಿ (PG) ಯಲ್ಲಿ ಉಳಿದುಕೋ, ಆಮೇಲೆ ನೋಡೋಣ” ಎಂದು ಧೈರ್ಯ ತುಂಬಿದ್ದರು. ಆದರೆ, ಸಮಾಜಕ್ಕೆ ಹೆದರಿ ಹಾಗೂ ಹೆತ್ತವರ ಮಾತನ್ನು ಮೀರಿದ ತಪ್ಪಿತಸ್ಥ ಭಾವನೆಯಿಂದ ಶ್ವೇತಾ ನೊಂದಿದ್ದಳು.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು!
ಅತಿಯಾದ ಟಾರ್ಚರ್ ತಡೆಯಲು ಸಾಧ್ಯವಾಗದ ಶ್ವೇತಾ ಅಂತಿಮವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾಳೆ. ಸಾವಿಗೂ ಮುನ್ನ ಆಕೆ ಬರೆದಿಟ್ಟಿರುವ ಡೆತ್ನೋಟ್ ಕಣ್ಣೀರು ತರಿಸುವಂತಿದೆ. “ಕ್ಷಮಿಸಿಬಿಡು ಅಮ್ಮಾ.. ನಾನು ತಪ್ಪು ಮಾಡಿಬಿಟ್ಟೆ.. ನನ್ನ ಗಂಡ ಹಾಗೂ ಆತನ ಅಕ್ಕನನ್ನು ಮಾತ್ರ ಸುಮ್ಮನೆ ಬಿಡಬೇಡಿ” ಎಂದು ಡೆತ್ನೋಟ್ನಲ್ಲಿ ತನಗಾದ ಅನ್ಯಾಯವನ್ನು ತೋಡಿಕೊಂಡಿದ್ದಾಳೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಡಿಜಿಟಲ್ ಜಗತ್ತಿನ ಪ್ರೀತಿ ಮತ್ತು ಇಂದಿನ ಯುವ ಪೀಳಿಗೆಗೆ ಎಚ್ಚರಿಕೆ!
ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಸಿಗುವ ಲೈಕ್ಸ್, ಕಾಮೆಂಟ್ಗಳು ಹಾಗೂ ಅಲ್ಲಿ ತೇಲಿ ಬರುವ ಮಾತುಗಳೇ ನಿಜವಾದ ಜೀವನ ಅಂದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ. ಹೆತ್ತವರು ತಮಗಿರುವ ಜೀವನದ ಅನುಭವದಿಂದ ಮಕ್ಕಳ ಭವಿಷ್ಯಕ್ಕಾಗಿ ಹೆದರುತ್ತಾರೆ. 25 ವರ್ಷದ ಶ್ವೇತಾ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಬದಲು, ಹೆತ್ತವರ ಬಳಿ ಧೈರ್ಯವಾಗಿ ಬಂದು ನಿಂತಿದ್ದರೆ ಇಂದು ಒಂದು ಜೀವ ಉಳಿಯುತ್ತಿತ್ತೇನೋ? ಸಾಮಾಜಿಕ ಜಾಲತಾಣಗಳ ವ್ಯಾಮೋಹ ಹಾಗೂ ಹೆತ್ತವರನ್ನು ಎದುರು ಹಾಕಿಕೊಂಡು ಮಾಡುವ ಮದುವೆಗಳು ಎಂತಹ ದುರಂತಕ್ಕೆ ಕಾರಣವಾಗುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.



