ಪುರಾಣಗಳ ಟೆಲಿಪೋರ್ಟೇಶನ್ ಮತ್ತು ಆಧುನಿಕ ಭೌತಶಾಸ್ತ್ರ..!


ನಮ್ಮ ಪುರಾಣಗಳನ್ನು ಓದುವಾಗ ಅಥವಾ ಟಿವಿಯಲ್ಲಿ ಸೀರಿಯಲ್‌ಗಳನ್ನು ನೋಡುವಾಗ ನಾರದ ಮಹರ್ಷಿಗಳು ‘ನಾರಾಯಣ ನಾರಾಯಣ’ ಎನ್ನುತ್ತಾ ಭೂಲೋಕದಲ್ಲಿ ಮಾಯವಾಗಿ ಮರುಕ್ಷಣದಲ್ಲೇ ವೈಕುಂಠದಲ್ಲೋ ಅಥವಾ ದೇವಲೋಕದಲ್ಲೋ ಪ್ರತ್ಯಕ್ಷವಾಗುವ ದೃಶ್ಯಗಳನ್ನು ನಾವೆಲ್ಲರೂ ನೋಡಿದ್ದೇವೆ. ಕೇವಲ ನಾರದರಷ್ಟೇ ಅಲ್ಲ, ಮಹಾಭಾರತದ ಕೃಷ್ಣ, ರಾಮಾಯಣದ ದೇವತೆಗಳು, ವಿಶ್ವಾಮಿತ್ರ-ವಸಿಷ್ಠರಂತಹ ಮಹರ್ಷಿಗಳು ಕ್ಷಣಮಾತ್ರದಲ್ಲಿ ಕೋಟ್ಯಂತರ ಕಿಲೋಮೀಟರ್ ದೂರವಿರುವ ಲೋಕಗಳ ನಡುವೆ ಪ್ರಯಾಣ ಮಾಡುತ್ತಿದ್ದರು. ಇಷ್ಟು ದಿನಗಳ ಕಾಲ ನಮ್ಮ ಇತಿಹಾಸ ಮತ್ತು ವಿಜ್ಞಾನದ ಪುಸ್ತಕಗಳು ಇವೆಲ್ಲವನ್ನೂ ಕೇವಲ ಕಟ್ಟುಕಥೆ, ರೂಪಕ ಅಥವಾ ಅತಿಶಯೋಕ್ತಿ ಎಂದು ತಳ್ಳಿಹಾಕಿದ್ದವು. ಆದರೆ, ಇಪ್ಪತ್ತೊಂದನೇ ಶತಮಾನದ ಕ್ವಾಂಟಮ್ ಭೌತಶಾಸ್ತ್ರದ ಅತ್ಯಂತ ಆಳವಾದ ಸಂಶೋಧನೆಗಳು ಮತ್ತು ಸಮೀಕರಣಗಳನ್ನು ನಮ್ಮ ಪುರಾಣಗಳ ಈ ‘ಕ್ಷಣಮಾತ್ರದ ಪ್ರಯಾಣ’ದ ಜೊತೆ ಇಟ್ಟು ನೋಡಿದರೆ, ಸ್ವತಃ ಆಧುನಿಕ ವಿಜ್ಞಾನಿಗಳಿಗೆ ಬೆವರು ಇಳಿಯುತ್ತದೆ!
ನನ್ನ ಈ ಲೇಖನ ಯಾವುದೇ ಮೂಢನಂಬಿಕೆಯನ್ನಾಗಲಿ ಅಥವಾ ಕಪೋಲಕಲ್ಪಿತ ಕಥೆಗಳನ್ನಾಗಲಿ ವೈಭವೀಕರಿಸುವುದಿಲ್ಲ. ಬದಲಿಗೆ, ವಿಜ್ಞಾನ ಜಗತ್ತಿನ ಕಠಿಣ ಸತ್ಯಗಳು ಮತ್ತು ನಮ್ಮ ಸನಾತನ ಧರ್ಮದ ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರುವ ತತ್ವಗಳನ್ನು ಮುಖಾಮುಖಿ ನಿಲ್ಲಿಸಿ, ಈ ಇಡೀ ಬ್ರಹ್ಮಾಂಡದ ಅತಿ ದೊಡ್ಡ ‘ಚಿದಂಬರ ರಹಸ್ಯ’ವನ್ನು ಅತ್ಯಂತ ಸರಳವಾಗಿ ಬಿಡಿಸಿ ಹೇಳುತ್ತದೆ. ತಲೆ ಕೆರೆದುಕೊಳ್ಳಲು ಸಿದ್ಧರಾಗಿ, ಯಾಕೆಂದರೆ ವಾಸ್ತವವು ಕಲ್ಪನೆಗಿಂತ ರೋಚಕವಾಗಿದೆ!
ವಿಜ್ಞಾನದ ಪ್ರಕಾರ ಪ್ರಯಾಣ ಎಂದರೆ ಏನು?
ನಾವು ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕೆಂದರೆ ಒಂದು ಕಾರು ಅಥವಾ ರೈಲು ಅಥವಾ ವಿಮಾನ ಹತ್ತಬೇಕು. ಆ ವಾಹನಕ್ಕೆ ಒಂದು ನಿರ್ದಿಷ್ಟ ವೇಗವಿರುತ್ತದೆ. ಅದು ರಸ್ತೆಯ/ವಾಯುಪ್ರದೇಶ ಮೂಲಕ ಕ್ರಮಿಸಿಯೇ ಮೈಸೂರು ತಲುಪಬೇಕು. ಅಂದರೆ, ನಮ್ಮ ಭೌತಿಕ ಜಗತ್ತಿನಲ್ಲಿ ಪ್ರಯಾಣ ಎನ್ನುವುದು ‘ಕಾಲ’ ಮತ್ತು ‘ದೇಶ’ ಎಂಬ ಎರಡು ಚೌಕಟ್ಟುಗಳಿಗೆ ಒಳಪಟ್ಟಿರುತ್ತದೆ. ಆಲ್ಬರ್ಟ್ ಐನ್‌ಸ್ಟೈನ್ ತಮ್ಮ ‘ವಿಶೇಷ ಸಾಪೇಕ್ಷತಾ ಸಿದ್ಧಾಂತ’ದ ಮೂಲಕ ಜಗತ್ತಿಗೆ ಒಂದು ಪರಮ ನಿಯಮವನ್ನು ವಿಧಿಸಿದರು. ಅದೇನೆಂದರೆ, ಬ್ರಹ್ಮಾಂಡದಲ್ಲಿ ಬೆಳಕಿನ ವೇಗಕ್ಕಿಂತ ಮೂರು ಪಟ್ಟು ವೇಗವಾಗಿ ಯಾವುದೂ ಚಲಿಸಲು ಸಾಧ್ಯವಿಲ್ಲ. ಅಂದರೆ, ಒಂದು ವೇಳೆ ನಾವು ಬೆಳಕಿನ ವೇಗದಲ್ಲೇ ಚಲಿಸುವ ಬಾಹ್ಯಾಕಾಶ ನೌಕೆಯನ್ನು ಸೃಷ್ಟಿಸಿದರೂ, ನಮ್ಮ ಸೌರಮಂಡಲಕ್ಕೆ ಅತ್ಯಂತ ಹತ್ತಿರವಿರುವ ‘ಪ್ರಾಕ್ಸಿಮಾ ಸೆಂಚುರಿ’ ಎಂಬ ನಕ್ಷತ್ರವನ್ನು ತಲುಪಲು ನಮಗೆ ಕನಿಷ್ಠ ೪.೨ ವರ್ಷಗಳು ಬೇಕು! ಹಾಗಿರುವಾಗ, ನಮ್ಮ ಪುರಾಣಗಳಲ್ಲಿ ಹೇಳುವ ದೇವಲೋಕಗಳು ಅಥವಾ ಸಮಾಂತರ ಬ್ರಹ್ಮಾಂಡಗಳು ಕೋಟ್ಯಂತರ ಜ್ಯೋತಿರ್ವರ್ಷಗಳ ದೂರದಲ್ಲಿದ್ದರೆ, ದೇವತೆಗಳು ಮತ್ತು ಋಷಿಗಳು ಕ್ಷಣಮಾತ್ರದಲ್ಲಿ ಅಲ್ಲಿಗೆ ಹೋಗಿ ಬರಲು ಹೇಗೆ ಸಾಧ್ಯ?
ಐನ್‌ಸ್ಟೈನ್‌ರ ಈ ಭೌತಿಕ ವಿಜ್ಞಾನದ ನಿಯಮವನ್ನು ನಮ್ಮ ಋಷಿಗಳು ಹೇಗೆ ಬದಿಗೊತ್ತಿದರು?
ಇಲ್ಲೇ ನೋಡಿ ಕ್ವಾಂಟಮ್ ಜಗತ್ತಿನ ಎಂಟ್ರಿ ಆಗುವುದು!
ವಿಜ್ಞಾನ ಲೋಕದಲ್ಲಿ ಇಂದು ಅತ್ಯಂತ ಚರ್ಚೆಯಲ್ಲಿರುವ ವಿಷಯ ಎಂದರೆ ‘ಕ್ವಾಂಟಮ್ ಟೆಲಿಪೋರ್ಟೇಶನ್’. 1993ರಲ್ಲಿ ವಿಜ್ಞಾನಿಗಳ ತಂಡವೊಂದು ಸೈದ್ಧಾಂತಿಕವಾಗಿ ಮಂಡಿಸಿ, ಇಂದು ಪ್ರಯೋಗಾಲಯಗಳಲ್ಲಿ ಸಣ್ಣ ಸಣ್ಣ ಕಣಗಳ ಮಟ್ಟದಲ್ಲಿ ಪ್ರಯೋಗಗಳ ಮೂಲಕ ಸಾಬೀತುಪಡಿಸಿರುವ ತಂತ್ರಜ್ಞಾನವಿದು. ಇಲ್ಲಿ ಜನರು ತಪ್ಪು ತಿಳಿಯುವುದು ಏನೆಂದರೆ, ಟೆಲಿಪೋರ್ಟೇಶನ್ ಎಂದರೆ ಮನುಷ್ಯನ ರಕ್ತ, ಮಾಂಸ, ಮೂಳೆಯ ದೇಹವೇ ಗಾಳಿಯಲ್ಲಿ ಕರಗಿ ತಂತಿಯಿಲ್ಲದೆ ಇನ್ನೊಂದು ಕಡೆಗೆ ಹಾರಿ ಹೋಗುತ್ತದೆ ಎಂದು. ಖಂಡಿತಾ ಇಲ್ಲ!
ವಿಜ್ಞಾನದ ಪ್ರಕಾರ ಅದು ಸಾಧ್ಯವಿಲ್ಲ.
ಹಾಗಾದರೆ ಕ್ವಾಂಟಮ್ ಟೆಲಿಪೋರ್ಟೇಶನ್ ಹೇಗೆ ಕೆಲಸ ಮಾಡುತ್ತದೆ? ನಾವು ಕಳೆದ ಲೇಖನದಲ್ಲಿ ಓದಿದ ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್ ನೆನಪಿಸಿಕೊಳ್ಳಿ. ಎರಡು ಕಣಗಳನ್ನು ಒಂದಕ್ಕೊಂದು ಬೆಸೆದಾಗ, ಅವು ಬ್ರಹ್ಮಾಂಡದ ಯಾವುದೇ ಮೂಲೆಯಲ್ಲಿದ್ದರೂ ಒಂದೇ ಕ್ಷಣದಲ್ಲಿ ಪರಸ್ಪರ ಸ್ಪಂದಿಸುತ್ತವೆ. ವಿಜ್ಞಾನಿಗಳು ಈ ತತ್ವವನ್ನು ಬಳಸಿ ಒಂದು ಜಾದೂ ಮಾಡುತ್ತಾರೆ.
ಮೊದಲಿಗೆ ಭೂಮಿ ಮತ್ತು ಮಂಗಳ ಗ್ರಹದ ನಡುವೆ ಎರಡು ಕಣಗಳನ್ನು ಎಂಟ್ಯಾಂಗಲ್ ಮಾಡಿ ಇಡಲಾಗುತ್ತದೆ. ಈಗ ಭೂಮಿಯ ಮೇಲಿರುವ ಒಂದು ವಸ್ತುವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ, ಅದರ ಪ್ರತಿಯೊಂದು ಪರಮಾಣುವಿನ ಕ್ವಾಂಟಮ್ ಸ್ಥಿತಿಯ ನಿಖರವಾದ ‘ಮಾಹಿತಿ’ಯನ್ನು ಕಲೆಹಾಕಲಾಗುತ್ತದೆ. ಆ ಮಾಹಿತಿಯನ್ನು ಎಂಟ್ಯಾಂಗಲ್ ಆದ ಕಣದ ಮೂಲಕ ಮಂಗಳ ಗ್ರಹಕ್ಕೆ ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ರವಾನಿಸಲಾಗುತ್ತದೆ. ಮಂಗಳ ಗ್ರಹದಲ್ಲಿ ಆ ಮಾಹಿತಿಯನ್ನು ಪಡೆದ ತಕ್ಷಣ, ಅಲ್ಲಿ ಈಗಾಗಲೇ ಇರುವ ಮೂಲ ಕಣಗಳನ್ನು ಬಳಸಿ, ಭೂಮಿಯ ಮೇಲಿದ್ದ ವಸ್ತುವಿನ ನೂರಕ್ಕೆ ನೂರು ಕರಾರುವಾಕ್ಕಾದ ನಕಲನ್ನು ಮರುಸೃಷ್ಟಿ ಮಾಡಲಾಗುತ್ತದೆ!
ಈ ಪ್ರಕ್ರಿಯೆಯಲ್ಲಿ ಭೂಮಿಯ ಮೇಲಿದ್ದ ಮೂಲ ವಸ್ತು ಸಂಪೂರ್ಣವಾಗಿ ನಾಶವಾಗುತ್ತದೆ. ಅಂದರೆ, ವಸ್ತು ಪ್ರಯಾಣ ಮಾಡಲಿಲ್ಲ; ವಸ್ತುವಿನ ಇಡೀ ಅಸ್ತಿತ್ವದ ರಹಸ್ಯವಾಗಿದ್ದ ‘ಮಾಹಿತಿ’ ಮಾತ್ರ ಪ್ರಯಾಣ ಮಾಡಿತು!
ಈಗ ವಿಜ್ಞಾನದ ಈ ಕ್ವಾಂಟಮ್ ಟೆಲಿಪೋರ್ಟೇಶನ್ ನಿಯಮವನ್ನು ನಮ್ಮ ಸನಾತನ ಧರ್ಮದ ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳಿರುವ ‘ಪಂಚಕೋಶ’ ಸಿದ್ಧಾಂತದ ಜೊತೆ ತಳುಕು ಹಾಕಿ ನೋಡಿ. ನಮ್ಮ ಋಷಿಗಳು ಮಾನವನ ಅಸ್ತಿತ್ವವನ್ನು ಐದು ಪದರಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ. ನಮ್ಮ ಕಣ್ಣಿಗೆ ಕಾಣುವ ರಕ್ತ, ಮಾಂಸದ ಭೌತಿಕ ದೇಹವನ್ನು ಅನ್ನಮಯ ಕೋಶ ಎನ್ನಲಾಗುತ್ತದೆ. ಪ್ರಾಣಮಯ ಮತ್ತು ಮನೋಮಯ ಕೋಶಗಳು ನಮ್ಮ ಶಕ್ತಿ ಹಾಗೂ ಆಲೋಚನೆಗಳ ತರಂಗಗಳಾಗಿವೆ. ವಿಜ್ಞಾನಮಯ ಕೋಶವು ಅತ್ಯಂತ ಮುಖ್ಯವಾದದ್ದು, ಇದುವೇ ಶುದ್ಧ ಜ್ಞಾನ ಮತ್ತು ‘ಮಾಹಿತಿ’ಯ ಕೋಶವಾಗಿದೆ. ಅಂತಿಮವಾಗಿ ಉಳಿಯುವ ಆತ್ಮವೇ ಆನಂದಮಯ ಕೋಶ.
ಆಧುನಿಕ ವಿಜ್ಞಾನವು ಇಂದು ಮನುಷ್ಯನನ್ನು ಕೇವಲ ಅನ್ನಮಯ ಕೋಶ ಅಂದರೆ ಪರಮಾಣುಗಳ ಜೋಡಣೆ ಎಂದು ಮಾತ್ರ ನೋಡುತ್ತಿದೆ. ಆದರೆ ನಮ್ಮ ಋಷಿ-ಮುನಿಗಳು ಯೋಗಸಾಧನೆ ಮತ್ತು ತಪಸ್ಸಿನ ಮೂಲಕ ತಮ್ಮ ಪ್ರಜ್ಞೆಯನ್ನು ‘ವಿಜ್ಞಾನಮಯ ಕೋಶ’ದ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದರು. ಅವರಿಗೆ ಚೆನ್ನಾಗಿ ತಿಳಿದಿತ್ತು, ಈ ಭೌತಿಕ ದೇಹವನ್ನು ಬೆಳಕಿನ ವೇಗದಲ್ಲಿ ತಳ್ಳುವುದಕ್ಕೆ ಹೋದರೆ ಐನ್‌ಸ್ಟೈನ್‌ರ ಭೌತವಿಜ್ಞಾನದ ನಿಯಮದಂತೆ ಇಡೀ ದೇಹವೇ ಭಸ್ಮವಾಗಿಬಿಡುತ್ತದೆ ಎಂದು. ಹಾಗಾಗಿ ಅವರು ತಮ್ಮ ದೇಹದ ಪ್ರತಿಯೊಂದು ಕಣದ ನಿಖರವಾದ ಬ್ಲೂಪ್ರಿಂಟ್ ಅಥವಾ ಮಾಹಿತಿಯನ್ನು ಬ್ರಹ್ಮಾಂಡದ ಕ್ವಾಂಟಮ್ ಫೀಲ್ಡ್‌ನೊಂದಿಗೆ ಕನೆಕ್ಟ್ ಮಾಡುತ್ತಿದ್ದರು. ಯಾವಾಗ ಒಬ್ಬ ಋಷಿ ತನ್ನ ದೇಹದ ಮಾಹಿತಿಯನ್ನು ಬ್ರಹ್ಮಾಂಡದ ಸಂಕೇತಗಳಾಗಿ ಪರಿವರ್ತಿಸುತ್ತಿದ್ದನೋ, ಆ ಕ್ಷಣದಲ್ಲಿ ಅವನ ಭೌತಿಕ ದೇಹ ಇಲ್ಲಿ ಮಾಯವಾಗುತ್ತಿತ್ತು. ಆ ಮಾಹಿತಿ ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್ ತತ್ವದ ಆಧಾರದ ಮೇಲೆ ದೇವಲೋಕದಂತಹ ಸಮಾಂತರ ಜಗತ್ತನ್ನು ತಲುಪಿದ ತಕ್ಷಣ, ಅಲ್ಲಿನ ಪಂಚಭೂತಗಳನ್ನು ಬಳಸಿಕೊಂಡು ಮತ್ತೆ ಅದೇ ದೇಹವನ್ನು ಮರುಸೃಷ್ಟಿಸಿಕೊಳ್ಳುತ್ತಿದ್ದರು!
ಇದನ್ನೇ ನಮ್ಮ ಪುರಾಣಗಳು ‘ಸಿದ್ಧಿಗಳು’ ಅಥವಾ ‘ದೇವಯಾನ’ ಎಂದು ಕರೆದವು.
ನಮ್ಮ ಸನಾತನ ಚಿಂತನೆಯಲ್ಲಿ ಕಣ ಕಣದಲ್ಲೂ ಆ ಪರಮ ಚೈತನ್ಯ ಅಡಗಿದೆ ಎನ್ನಲಾಗುತ್ತದೆ. ಆಧುನಿಕ ಕ್ವಾಂಟಮ್ ಭೌತಶಾಸ್ತ್ರದ ‘ಹೊಲೊಗ್ರಾಫಿಕ್ ಪ್ರಿನ್ಸಿಪಲ್’ ಕೂಡ ಇದನ್ನೇ ಹೇಳುತ್ತದೆ. ಒಂದು ಹೊಲೊಗ್ರಾಫಿಕ್ ಚಿತ್ರವನ್ನು ನೀವು ಎಷ್ಟು ತುಂಡುಗಳಾಗಿ ಕತ್ತರಿಸಿದರೂ, ಆ ಪ್ರತಿಯೊಂದು ಸಣ್ಣ ತುಂಡಿನೊಳಗೂ ಇಡೀ ಚಿತ್ರದ ಸಂಪೂರ್ಣ ಮಾಹಿತಿ ಅಡಗಿರುತ್ತದೆ! ಅದೇ ರೀತಿ, ಬ್ರಹ್ಮಾಂಡದ ಒಂದು ಪುಟ್ಟ ಅಣುವಿನಲ್ಲೂ ಇಡೀ ಬ್ರಹ್ಮಾಂಡದ ಕೋಡಿಂಗ್ ಅಡಗಿದೆ. ಋಷಿಗಳು ತಪಸ್ಸಿನ ಮೂಲಕ ಈ ಮೂಲ ಕೋಡಿಂಗ್ ಅನ್ನು ಹ್ಯಾಕ್ ಮಾಡುತ್ತಿದ್ದರು. ಪತಂಜಲಿ ಯೋಗಸೂತ್ರದ ವಿಭೂತಿ ಪಾದದ ನಲವತ್ತೆರಡನೇ ಶ್ಲೋಕ (ಕಾಯಕಾಶಯೋಃ ಸಂಬಂಧಸಂಯಮಾಲ್ಲಘುತೂಲಸಮಾಪತ್ತೇಶ್ಚಾಕಾಶಗಮನಮ್) ದಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ದೇಹ ಮತ್ತು ಆಕಾಶದ ನಡುವಿನ ಸಂಬಂಧದ ಮೇಲೆ ಸಂಯಮ ಸಾಧನೆ ಮಾಡುವುದರಿಂದ, ದೇಹವು ಹತ್ತಿಯಂತೆ ಹಗುರವಾಗಿ ಆಕಾಶದಲ್ಲಿ ಚಲಿಸುವ ಶಕ್ತಿಯನ್ನು ಪಡೆಯುತ್ತದೆ ಎಂದು ಅಲ್ಲಿ ಹೇಳಲಾಗಿದೆ. ಇಲ್ಲಿ ಹಗುರವಾಗುವುದು ಎಂದರೆ ತೂಕ ಕಳೆದುಕೊಳ್ಳುವುದಲ್ಲ; ದೇಹವನ್ನು ಭೌತಿಕ ಸ್ಥಿತಿಯಿಂದ ಕ್ವಾಂಟಮ್ ತರಂಗಗಳ ಸ್ಥಿತಿಗೆ ಪರಿವರ್ತಿಸುವುದು! ಯಾವಾಗ ದೇಹವು ಅಲೆಯ ರೂಪಕ್ಕೆ ಬರುತ್ತದೆಯೋ, ಅದಕ್ಕೆ ಕಾಲ ಮತ್ತು ದೇಶದ ಗಡಿಗಳು ಇರುವುದಿಲ್ಲ.
ನಾವು ಇಲ್ಲಿ ಅತ್ಯಂತ ಸ್ಪಷ್ಟವಾಗಿ ಮತ್ತು ಜವಾಬ್ದಾರಿಯುತವಾಗಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ವಿಜ್ಞಾನ ಮತ್ತು ನಮ್ಮ ಪುರಾಣಗಳನ್ನು ಕನೆಕ್ಟ್ ಮಾಡುವಾಗ ನಾವು ಎಲ್ಲೂ ವಿಜ್ಞಾನದ ಕಠಿಣ ಸತ್ಯಗಳನ್ನು ತಿರುಚಬಾರದು. ಇಂದಿನ ಆಧುನಿಕ ವಿಜ್ಞಾನವು ಕೇವಲ ಫೋಟಾನ್ ಮತ್ತು ಆಟಮ್‌ಗಳ ಮಟ್ಟದಲ್ಲಿ ಮಾತ್ರ ಕ್ವಾಂಟಮ್ ಟೆಲಿಪೋರ್ಟೇಶನ್ ಮಾಡಿದೆ. ಕೋಟ್ಯಂತರ ಜೀವಕೋಶಗಳಿರುವ ಒಬ್ಬ ಮನುಷ್ಯನನ್ನು ಟೆಲಿಪೋರ್ಟ್ ಮಾಡುವ ತಂತ್ರಜ್ಞಾನ ಇಂದಿನ ವಿಜ್ಞಾನದ ಬಳಿ ಇಲ್ಲ. ಯಾಕೆಂದರೆ, ಮನುಷ್ಯನ ದೇಹದಲ್ಲಿರುವ ಪ್ರತಿಯೊಂದು ಅಣುವಿನ ಕ್ವಾಂಟಮ್ ಮಾಹಿತಿಯನ್ನು ಕಲೆಹಾಕಬೇಕೆಂದರೆ, ಇಡೀ ಬ್ರಹ್ಮಾಂಡದಲ್ಲಿರುವ ಕಂಪ್ಯೂಟರ್‌ಗಳನ್ನು ಒಟ್ಟಿಗೆ ಸೇರಿಸಿದರೂ ಸಾಲದಷ್ಟು ಬೃಹತ್ ಡೇಟಾ ಸೃಷ್ಟಿಯಾಗುತ್ತದೆ!
ಆದರೆ ನಮ್ಮ ಋಷಿಮುನಿಗಳು ಯಾವುದೇ ಯಂತ್ರಗಳನ್ನು ಬಳಸುತ್ತಿರಲಿಲ್ಲ. ಅವರ ಮನಸ್ಸು ಮತ್ತು ಅಂತಃಪ್ರಜ್ಞೆಯು ಜಗತ್ತಿನ ಅತ್ಯಂತ ಶಕ್ತಿಶಾಲಿ ಕ್ವಾಂಟಮ್ ಸೂಪರ್ ಕಂಪ್ಯೂಟರ್ ಆಗಿತ್ತು!
ಯೋಗದ ಉನ್ನತ ಸ್ಥಿತಿಯಲ್ಲಿ ಅವರು ಇಡೀ ಬ್ರಹ್ಮಾಂಡದ ಶಕ್ತಿಯೊಂದಿಗೆ ಒಂದಾಗುತ್ತಿದ್ದರು. ಯಾರು ಬ್ರಹ್ಮಾಂಡದ ಮೂಲ ಶಕ್ತಿಯೊಂದಿಗೆ ತಾದಾತ್ಮ್ಯ ಸಾಧಿಸುತ್ತಾರೋ, ಅವರಿಗೆ ಬ್ರಹ್ಮಾಂಡದ ನಿಯಮಗಳನ್ನು ಬದಲಾಯಿಸುವುದು ಅಥವಾ ತಮಗೆ ಬೇಕಾದಂತೆ ಬಳಸುವುದು ಅತ್ಯಂತ ಸುಲಭದ ಮಾತಾಗಿತ್ತು.
ವಿಜ್ಞಾನವು ಇಂದು ಯಾವುದನ್ನು ಕ್ವಾಂಟಮ್ ಫೀಲ್ಡ್ ಅಥವಾ ಶೂನ್ಯ ಸ್ಥಿತಿ ಎನ್ನುತ್ತಿದೆಯೋ, ಅದನ್ನೇ ನಮ್ಮ ವೇದಾಂತವು ‘ಬ್ರಹ್ಮನ್’ ಅಥವಾ ‘ಪರಮಶಿವ’ ಸ್ಥಿತಿ ಎನ್ನುತ್ತದೆ. ಬಿಗ್ ಬ್ಯಾಂಗ್ ಮಹಾಸ್ಫೋಟದ ಮುನ್ನ ನಾವೆಲ್ಲರೂ ಒಂದೇ ಬಿಂದುವಿನಲ್ಲಿದ್ದ ಕಾರಣ, ಬ್ರಹ್ಮಾಂಡದ ಪ್ರತಿಯೊಂದು ಕಣವೂ ಇಂದಿಗೂ ಒಂದಕ್ಕೊಂದು ಸಂಪರ್ಕದಲ್ಲಿದೆ. ಋಷಿ-ಮುನಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಾಯವಾಗಿ ಪ್ರತ್ಯಕ್ಷವಾಗುತ್ತಿದ್ದರು ಎಂದರೆ ಅವರು ಎಲ್ಲೂ ಹೋಗುತ್ತಿರಲಿಲ್ಲ! ಅವರು ಬ್ರಹ್ಮಾಂಡದ ಆ ಅದೃಶ್ಯ ಕ್ವಾಂಟಮ್ ಜಾಲದ ಮೂಲಕ ಒಂದು ಕಡೆಯಿಂದ ತನ್ನ ಪ್ರಜ್ಞೆಯನ್ನು ಇನ್ನೊಂದು ಕಡೆಗೆ ವರ್ಗಾಯಿಸುತ್ತಿದ್ದರು ಅಷ್ಟೇ.
ನಾವು ಕಣ್ಣಾರೆ ನೋಡುವ ಈ ಭೌತಿಕ ಜಗತ್ತು ಕೇವಲ ಒಂದು ತೆರೆ ಇದ್ದಂತೆ. ಇದರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕ್ವಾಂಟಮ್ ಜಗತ್ತಿನ ಆಟಗಳನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಅಂತಃಚಕ್ಷುವಿನಿಂದ ಕಂಡು ಗ್ರಂಥಗಳಲ್ಲಿ ಬರೆದಿಟ್ಟಿದ್ದಾರೆ.
ಇಂದು ವಿಜ್ಞಾನವು ತಡವಾಗಿ, ಸಮೀಕರಣಗಳ ಮೂಲಕ ಅದೇ ಸತ್ಯದ ಹತ್ತಿರಕ್ಕೆ ಹೆಜ್ಜೆ ಇಡುತ್ತಿದೆ. ನಮ್ಮ ಸನಾತನ ಸಿದ್ಧಾಂತಗಳ ಆಳ ಮತ್ತು ಆಧುನಿಕ ವಿಜ್ಞಾನದ ವಿಸ್ಮಯ ಒಟ್ಟಿಗೆ ಸೇರಿದರೆ ಮೂಡುವ ಈ ಚಿತ್ರಣ ನಿಜಕ್ಕೂ ಮೈಮನ ರೋಮಾಂಚನಗೊಳಿಸುತ್ತದೆ ಅಲ್ವಾ.
ನನ್ನ ಪ್ರಕಾರ ಪುರಾತನ ಕಾಲದಲ್ಲಿ ಈಗಿರುವುದಕ್ಕಿಂತ ಹತ್ತು ಸಾವಿರ ಪಟ್ಟು ಮುಂದುವರಿದ ಅದ್ಭುತ ತಂತ್ರಜ್ಞಾನವಿತ್ತು. ಆದರೆ ಯಾವುದೋ ಪ್ರಕೃತಿಯ ನಿಯಮ ಅಥವಾ ಅನಿವಾರ್ಯ ಕಾರಣಕ್ಕೆ ಅದೆಲ್ಲಾ ಕ್ರಮೇಣ ಇತಿಹಾಸದ ಪುಟಗಳಲ್ಲಿ ಅಳಿಸಿ ಹೋಗಿ, ಮತ್ತೆ ಹೊಸದೊಂದು ಮನ್ವಂತರ ಉದಯವಾಯಿತು. ಇನ್ನು ಈ ಲೇಖನದ ವಿಷಯಕ್ಕೆ ಬಂದರೆ, ಇಲ್ಲಿ ನಾನೇ ಮಂಡಿಸಿರುವ ವಿಚಾರಗಳೇ ಅಂತಿಮವಲ್ಲ. ನಾನು ಕೇವಲ ಒಬ್ಬ ಪಾಮರ, ದೊಡ್ಡ ಪಂಡಿತನೇನಲ್ಲ. ನನ್ನ ಈ ಬರಹ ಕೇವಲ ನನ್ನ ವೈಯಕ್ತಿಕ ಅನಿಸಿಕೆ ಮತ್ತು ಅಧ್ಯಯನದ ಒಂದು ಸಣ್ಣ ಪ್ರಯತ್ನ ಅಷ್ಟೇ. ಚರ್ಚೆಗೆ ಸದಾ ಮುಕ್ತ ಅವಕಾಶವಿದೆ..
ನಿಮ್ಮಲ್ಲಿರುವ ಉನ್ನತ ಜ್ಞಾನ ಮತ್ತು ವಿಚಾರಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು. ಈ ಲೇಖನವನ್ನು ಯಾರೇ ಒಪ್ಪಲಿ ಅಥವಾ ಬಿಡಲಿ, ಅದರಿಂದ ವೈಯಕ್ತಿಕವಾಗಿ ನಾನೇನೂ ಕಳೆದುಕೊಳ್ಳುವುದಿಲ್ಲ. ಒಂದು ವೇಳೆ ಪಡೆದುಕೊಳ್ಳುವುದಿದ್ದರೆ ಅದು ನಿಮ್ಮಿಂದ ಸಿಗುವ ಜ್ಞಾನ ಮಾತ್ರ! ನನ್ನ ಈ ಯೋಚನೆಗಳ ಮತ್ತು ಕನಸುಗಳ ಯಾತ್ರೆ ಮಾತ್ರ ಎಂದಿಗೂ ನಿಲ್ಲುವುದಿಲ್ಲ, ಏಕೆಂದರೆ ನನ್ನೊಳಗಿನ ಜ್ಞಾನದ ದಾಹ ಅಷ್ಟು ಬೇಗ ತಣಿಯುವಂಥದ್ದಲ್ಲ. ವೃತ್ತಿಯಲ್ಲಿ ನಾನೊಬ್ಬ ಸಾಮಾನ್ಯ ವಿತರಕ, ಪ್ರವೃತ್ತಿಯಲ್ಲಿ ಆ ದೇವರ ಸೇವಕ. ಸದಾ ಆರೋಗ್ಯಕರ ಚರ್ಚೆಗೆ ನಿಮಗೆ ಸ್ವಾಗತ..![]()
ಲೇಖಕರು: ಎಂ. ಕೃಷ್ಣಪ್ರಸಾದ್ ಭಟ್ ಮದ್ದಡ್ಕ



