ಸ್ಯಾಂಕಿ ಕೆರೆಗೆ ಹಾರಿ ಕಾಲೇಜು ವಿದ್ಯಾರ್ಥಿನಿ ಆ*ತ್ಮಹ*ತ್ಯೆ

ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಕರುಣಾಜನಕ ಘಟನೆ ಸಂಭವಿಸಿದೆ. ನಗರದ ಮಲ್ಲೇಶ್ವರಂ ಬಳಿಯ ಪ್ರಸಿದ್ಧ ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿಯನ್ನು ಚಿಕ್ಕಬಾಣವಾರದ ನಿವಾಸಿಯಾದ ತೇಜು (20) ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಯುವತಿಯ ಸಾವಿನ ಹಿಂದೆ ಪ್ರೇಮ ವೈಫಲ್ಯದ ಶಂಕೆ ವ್ಯಕ್ತವಾಗಿದೆ. ತೇಜು ಕೆರೆಗೆ ಹಾರುವ ಮುನ್ನ ತನ್ನ ಪ್ರಿಯಕರನಿಗೆ ಮೊಬೈಲ್‌ನಲ್ಲಿ ಸಂದೇಶ (Message) ಒಂದನ್ನು ರವಾನಿಸಿ, ನಂತರ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಮೃತ ತೇಜು ಅವರ ತಾಯಿ ‘ನಮ್ಮ ಮೆಟ್ರೋ’ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿದ್ದಾರೆ. ಪೋಷಕರು ಕೆಲ ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದು ದೂರಾಗಿದ್ದರು ಎನ್ನಲಾಗಿದೆ. ಸದ್ಯಕ್ಕೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



