ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಟೋರಿಯಸ್ ದಲ್ಲಾಳಿ ಬಂಧನ!

ಬೆಂಗಳೂರಿನಲ್ಲಿ ಹೊರರಾಜ್ಯಗಳ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ತಲೆಮರೆಸಿಕೊಂಡಿದ್ದ ನಟೋರಿಯಸ್ ದಲ್ಲಾಳಿಯೊಬ್ಬನನ್ನು ಮಾದನಾಯಕನಹಳ್ಳಿ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಬಂಧಿತ ಆರೋಪಿಯಾಗಿದ್ದಾನೆ.
ಈತನ ಮೇಲೆ ಈಗಾಗಲೇ ನಗರದ ಪೀಣ್ಯಾ ಬಾಗಲಗುಂಟೆ ಹಾಗೂ ಸಿಸಿಬಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರ ಕಣ್ಣಿಗೆ ಮಣ್ಣೆರಚಿ ಸದಾ ತಪ್ಪಿಸಿಕೊಳ್ಳುತ್ತಿದ್ದ ಈ ಖತರ್ನಾಕ್ ಅಸಾಮಿ ಈಗ ಕಂಬಿ ಎಣಿಸುವಂತಾಗಿದೆ.
ಆರೋಪಿ ಚೇತನ್ ಕುಮಾರ್ ದಂಧೆ ನಡೆಸಲು ಮತ್ತು ಪೊಲೀಸರಿಂದ ಬಚಾವ್ ಆಗಲು ವಿಭಿನ್ನ ಹಾದಿ ತುಳಿದಿದ್ದ. ಈತ ಮಂಗಳಮುಖಿಯ ವೇಷ ಧರಿಸಿಕೊಂಡು ಓಡಾಡುತ್ತಿದ್ದರಿಂದ ಪೊಲೀಸರು ಕೂಡ ಈತನನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ.

ಇದೇ ವೇಷ ಮರೆಯಲ್ಲಿ ದೆಹಲಿ, ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ ಯುವತಿಯರನ್ನು ಬೆಂಗಳೂರಿಗೆ ಕರೆತಂದು ದೊಡ್ಡ ಮಟ್ಟದಲ್ಲಿ ಅನೈತಿಕ ದಂಧೆ ನಡೆಸುತ್ತಿದ್ದ ಹಲವು ವರ್ಷಗಳಿಂದ ಹತ್ತಕ್ಕೂ ಹೆಚ್ಚು ಕೇಸ್ಗಳಲ್ಲಿ ಪೊಲೀಸರಿಗೆ ವಾಂಟೆಡ್ ಆಗಿದ್ದ ಈತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು.
ನೆನ್ನೆ (ಜುಲೈ 6) ಪೀಣ್ಯ ರಸ್ತೆಯ ಬಳಿಯಿರುವ ಲಾಡ್ಜ್ ರೂಮ್ ಒಂದರಲ್ಲಿ ಚೇತನ್ ಅಡಗಿರುವ ಬಗ್ಗೆ ಮಾದನಾಯಕನಹಳ್ಳಿ ಪೊಲೀಸರಿಗೆ ನಿಖರವಾದ ಗುಪ್ತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ನೇತೃತ್ವದ ತಂಡ, ಆ ಜಾಗದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಸುತ್ತುವರೆದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯ ಚೇತನ್ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಈತನ ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಈತ ಎಲ್ಲೆಲ್ಲಿ ದಂಧೆ ನಡೆಸುತ್ತಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.



