ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಭೀಕರ ಹ*ತ್ಯೆ!

ಬೆಂಗಳೂರು : ಬೆಂಗಳೂರಿನ ಕನಕಪುರ ರಸ್ತೆಯ ಜಾರಗನಹಳ್ಳಿ ಬಳಿ ತಡರಾತ್ರಿ ಕೇವಲ ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮೃತಪಟ್ಟ ಯುವಕನನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚೆಲುವ ಮತ್ತು ತೇಜ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ, ಹತ್ಯೆಗೀಡಾದ ಉದಯ್ ಕುಮಾರ್ ಹಾಗೂ ಆರೋಪಿಗಳ ನಡುವೆ ಈ ಮುಂಚೆ ಯಾವುದೇ ರೀತಿಯ ವೈಷಮ್ಯ ಅಥವಾ ಕನಿಷ್ಠ ಪರಿಚಯವೂ ಇರಲಿಲ್ಲ ಎಂದು ತಿಳಿದುಬಂದಿದೆ.

ಸ್ಥಳೀಯ ಬಾರ್ ಒಂದರಲ್ಲಿ ಉದಯ್ ಕುಮಾರ್ ಮತ್ತು ಆರೋಪಿಗಳು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಉದಯ್ ತಮ್ಮ ಕಡೆಗೆ ಗುರಾಯಿಸಿ ನೋಡಿದ್ದಾನೆ ಎಂದು ಆರೋಪಿಸಿ ಇಬ್ಬರು ಗಲಾಟೆ ತೆಗೆದಿದ್ದಾರೆ. ನಂತರ ಬಾರ್‌ನಿಂದ ಹೊರಬಂದ ಉದಯ್‌ನನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ರಸ್ತೆಯಲ್ಲಿ ತಡೆದು ನಿಲ್ಲಿಸಿ ಮೊದಲು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ತದನಂತರ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



