ಸಮಾಧಿ ಅಗೆದು ಚಿನ್ನದ ಸರ ದೋಚಿದ ಕಳ್ಳರು..! 16ನೇ ದಿನದ ಕಾರ್ಯಕ್ಕೆ ಹೋದ ಕುಟುಂಬಕ್ಕೆ ಶಾಕ್

ಕೊಯಮತ್ತೂರು: ಮಾನವೀಯತೆಯನ್ನೇ ಮರೆಸುವಂತಹ ಆಘಾತಕಾರಿ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಸಮಾಧಿಯನ್ನೇ ಅಗೆದು, ಶವದ ಮೇಲಿದ್ದ 24 ಗ್ರಾಂ ಚಿನ್ನದ ಸರವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮೀನು ವ್ಯಾಪಾರಿಯಾಗಿದ್ದ ವ್ಯಕ್ತಿಯೊಬ್ಬರು ನಿಧನರಾದ ಬಳಿಕ, ಅವರ ಕೊರಳಲ್ಲಿದ್ದ 24 ಗ್ರಾಂ ಚಿನ್ನದ ಸರವನ್ನು ತೆಗೆಯದೆ ಕುಟುಂಬಸ್ಥರು ಶವದೊಂದಿಗೆ ಸಮಾಧಿ ಮಾಡಿದ್ದರು. ಈ ವಿಚಾರ ತಿಳಿದಿದ್ದ ಕಳ್ಳರು ತಡರಾತ್ರಿ ಸ್ಮಶಾನಕ್ಕೆ ನುಗ್ಗಿ ಸಮಾಧಿಯನ್ನು ಅಗೆದು ಚಿನ್ನದ ಸರವನ್ನು ಕಳವು ಮಾಡಿದ್ದಾರೆ.
ಜೂನ್ 22ರಂದು ಮೃತರ 16ನೇ ದಿನದ ಪುಣ್ಯತಿಥಿ ಕಾರ್ಯ ನೆರವೇರಿಸಲು ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ತೆರಳಿದಾಗ, ಸಮಾಧಿಯ ಸುತ್ತಲಿನ ಮಣ್ಣು ಅಸ್ತವ್ಯಸ್ತಗೊಂಡಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಪರಿಶೀಲಿಸಿದ ವೇಳೆ ಸಮಾಧಿ ಅಗೆದು ಚಿನ್ನದ ಸರ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಯನ್ನು ಕುಟುಂಬಸ್ಥರು ಪ್ರಶ್ನಿಸಿದಾಗ, ಇಬ್ಬರು ಸ್ಥಳೀಯರು ತಡರಾತ್ರಿ ಸ್ಮಶಾನಕ್ಕೆ ಬಂದು ಸಮಾಧಿ ಅಗೆದು ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುವುದಾಗಿ ಆತ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಘಟನೆ ಸಂಬಂಧ ಮೃತರ ಮಗ ನೀಡಿದ ದೂರಿನ ಮೇರೆಗೆ ಪೀಲಮೇಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಮಶಾನದ ಉಸ್ತುವಾರಿ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.



