ಆನ್‌ಲೈನ್ ಜ್ಯೋತಿಷ್ಯದ ಹೆಸರಿನಲ್ಲಿ 1.84 ಲಕ್ಷ ರೂ. ವಂಚನೆ..!!

ಶಿವಮೊಗ್ಗ: ಆನ್‌ಲೈನ್ ಜ್ಯೋತಿಷ್ಯದ ಹೆಸರಿನಲ್ಲಿ ಸೈಬರ್ ವಂಚಕರು ಯುವತಿಯೊಬ್ಬರಿಗೆ 1.84 ಲಕ್ಷ ರೂ. ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ತಾಯಿಯ ಅನಾರೋಗ್ಯಕ್ಕೆ ಪರಿಹಾರ ಹುಡುಕುತ್ತಿದ್ದ ವೇಳೆ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ‘ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯಾಲಯ’ ಜಾಹೀರಾತು ನೋಡಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಳು. ತಾನು ಜ್ಯೋತಿಷಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಪೂಜೆ ಮಾಡಬೇಕೆಂದು ಹೇಳಿ ಮೊದಲು 501 ರೂ. ಪಡೆದುಕೊಂಡಿದ್ದಾನೆ.
ಬಳಿಕ “ತಾಯಿಗೆ ಮಾಟ-ಮಂತ್ರ ಮಾಡಲಾಗಿದೆ, ದೊಡ್ಡ ಪೂಜೆ ಮಾಡದಿದ್ದರೆ ಜೀವಕ್ಕೆ ಅಪಾಯ” ಎಂದು ಭಯ ಹುಟ್ಟಿಸಿ 25 ಸಾವಿರ ರೂ. ಕಳುಹಿಸಿಕೊಳ್ಳಲಾಗಿದೆ. ನಂತರ ಮತ್ತೊಬ್ಬರನ್ನು ‘ಮುಖ್ಯ ಗುರೂಜಿ’ ಎಂದು ಪರಿಚಯಿಸಿ ಯುವತಿ ಹಾಗೂ ಆಕೆಯ ತಾಯಿಯ ಫೋಟೋಗಳನ್ನು ಪಡೆದು, ಪೂಜೆ ನಡೆಯುತ್ತಿರುವಂತೆ ನಕಲಿ ಚಿತ್ರಗಳನ್ನು ಕಳುಹಿಸಿ ನಂಬಿಕೆ ಮೂಡಿಸಲಾಗಿದೆ.
ಈ ರೀತಿ ಹಂತ ಹಂತವಾಗಿ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ಒಟ್ಟು 1,84,302 ರೂ. ಹಣವನ್ನು ವಂಚಕರು ಪಡೆದುಕೊಂಡಿದ್ದಾರೆ. ಅನುಮಾನಗೊಂಡ ಯುವತಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



