ಭಾರಿ ಮಳೆಗೆ ಹಂಚಿನ ಮನೆಯ ಮೇಲ್ಛಾವಣಿ ಕುಸಿತ – ನಿದ್ದೆಯಲ್ಲೇ ಮಹಿಳೆ, ಇಬ್ಬರು ಬಾಲಕಿಯರ ಸಾ*ವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೇ ಮಂಗಳೂರಿನ ನಾಗೋರಿ ಪ್ರದೇಶದಲ್ಲಿ ಭೀಕರ ದುರಂತ ಸಂಭವಿಸಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಂಚಿನ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದ ಪರಿಣಾಮ ನಿದ್ದೆಯಲ್ಲಿದ್ದ ಮಹಿಳೆಯೊಬ್ಬರು ಮತ್ತು ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.
ಬುಧವಾರ ಮುಂಜಾನೆ ಸುಮಾರು 4.45ರಿಂದ 5 ಗಂಟೆಯ ವೇಳೆಗೆ ಮಣ್ಣು ಕುಸಿತದಿಂದ ಈ ಅವಘಡ ಸಂಭವಿಸಿದೆ. ಮೃತಪಟ್ಟವರನ್ನು ಶಾಂತಾ (35), ಅನಾಮಿಕಾ ಚೌರಾಸಿಯಾ (7) ಹಾಗೂ ತನು (3) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಗಾಯಗೊಂಡಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ.
ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಈ ಬಾಡಿಗೆ ಮನೆಯಲ್ಲಿ ಕಳೆದ 20 ವರ್ಷಗಳಿಂದ ನಾಲ್ಕು ಕುಟುಂಬಗಳು ವಾಸವಾಗಿದ್ದವು. ಅವುಗಳಲ್ಲಿ ಬಿಹಾರ ಮೂಲದ ಕುಟುಂಬಗಳೂ ಸೇರಿದ್ದವು.
ಲಾಲ್ ಬಾಬು ಅವರ ಕುಟುಂಬವೂ ಇದೇ ಮನೆಯಲ್ಲಿ ವಾಸವಾಗಿದ್ದು, ಅವರು ಹಾಗೂ ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಭಾಗದಲ್ಲಿ ಸುಮಾರು ಎಂಟು ತಿಂಗಳಿನಿಂದ ವಾಸವಾಗಿದ್ದ ಬಾಲಕೃಷ್ಣ–ಶಾಂತಾ ದಂಪತಿಯ ಪೈಕಿ ಶಾಂತಾ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾರಿ ಮಳೆಯಿಂದ ಉಂಟಾದ ಮಣ್ಣು ಕುಸಿತವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.



