ರಾಜ್ಯ

ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ನಿಧನ.

ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಇಂದು ಸುಳ್ಯದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಗ್ರಾಮೀಣ ಭಾಗಗಳಲ್ಲಿ ತೂಗುಸೇತುವೆಗಳನ್ನು ನಿರ್ಮಿಸಿಕೊಡುವ ಮೂಲಕ ಜನಜೀವನವನ್ನು ಅನನ್ಯ ರೀತಿಯಲ್ಲಿ ಬೆಸೆದ ಕರ್ಮಯೋಗಿ. ಸುಳ್ಯದವರಾದ ಗಿರೀಶ್ ಭಾರದ್ವಾಜ್ 1950ರ ಮೇ 2ರಂದು ಜನಿಸಿದರು. ಮಂಡ್ಯದ ಪಿಇಎಸ್ ಕಾಲೇಜಿನಿಂದ ಇಂಜಿನಿಯರಿಂಗ್‌ ಪದವಿ ಗಳಿಸಿದರು.

ಗಿರೀಶ್ ಭಾರದ್ವಾಜ್ ದೊಡ್ಡ ಸಂಸ್ಥೆಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಕನಸು ಹೊತ್ತಿದ್ದರಂತೆ. ಆದರೆ ಹಳ್ಳಿಯ ಜನರ ಸೇವೆಗಾಗಿ ಅವರು ಸೇತುವೆ ಕಟ್ಟುವ ಕಾಯಕದಲ್ಲಿ ನಿರತರಾದರು. ರಸ್ತೆ ಸಂಪರ್ಕವಿಲ್ಲದೆ, ಓಡಾಡಲು, ನಿತ್ಯದ ಜೀವನ ನಡೆಸಲು ಸಮಸ್ಯೆ ಎದುರಿಸುತ್ತಿದ್ದ ಕಡೆಗಳಲ್ಲಿ ತಮ್ಮ ವಿಶೇಷ ಕೌಶಲ್ಯ ಬಳಸಿ, ಸೇತುವೆಗಳನ್ನು ಕಟ್ಟಿ ನೆರವಾದರು. ಗಿರೀಶ್ ಭಾರದ್ವಾಜ್ ಅವರು 1989ರಲ್ಲಿ ದಕ್ಷಿಣ ಕರ್ನಾಟಕದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಮೊದಲು ಸೇತುವೆ ನಿರ್ಮಿಸಿದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕು, ಮಂಗಳೂರು ತಾಲ್ಲೂಕಿನ ಕುಪ್ಪೆಪದವಿನಲ್ಲಿ ನಿರ್ಮಾಣ ಮಾಡಿ ಹಳ್ಳಿ ಜನರಿಗೆ ನೆರವಾಗಿದ್ದರು.

ಅವರ 100ನೇ ಸೇತುವೆಯು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಮನೆಯ ಸಮೀಪವಿರುವ ಸುಳ್ಯದ ಮಂಡೆಕೋಲಿನಲ್ಲಿ ನಿರ್ಮಾಣವಾಗಿತ್ತು. ಕರ್ನಾಟಕ, ಆಂಧ್ರ, ಕೇರಳ, ಮಹಾರಾಷ್ಟ್ರ ಹೀಗೆ ದೇಶದ ವಿವಿಧೆಡೆ ಅವರು ಸುಮಾರು 140 ಸೇತುವೆಗಳ ನಿರ್ಮಾಣ ನೇತೃತ್ವ ವಹಿಸಿದ್ದರು. ಇವರು ನಿರ್ಮಿಸುವ ಸೇತುವೆಗಳು, ಸಾಂಪ್ರದಾಯಿಕ ಸೇತುವೆಗಳ ವೆಚ್ಚದ ಕೇವಲ 10ನೇ ಒಂದು ಭಾಗದಲ್ಲಿ ನಿರ್ಮಾಣವಾಗುತ್ತಿತ್ತು., ಸಾಮಾನ್ಯ ಸೇತುವೆ ಕಟ್ಟಲು ಮೂರು ವರ್ಷ ಬೇಕಾದರೆ, ಇವರ ತೂಗುಸೇತುವೆಗಳು ಕೇವಲ ಮೂರೇ ತಿಂಗಳಲ್ಲಿ ಸಿದ್ಧವಾಗುತ್ತಿದ್ದವು. ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಗಿರೀಶ್ ಭಾರದ್ವಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. 2017ರಲ್ಲಿ ಇವರಿಗೆ ದೇಶದ ಪದ್ಮಶ್ರೀ ಗೌರವ ಸಂದಿತ್ತು.

ಡಾ.ಗಿರೀಶ್ ಭಾರದ್ವಾಜ್ 2026ರ ಜುಲೈ 7ರಂದು ನಿಧನರಾಗಿದ್ದಾರೆ. ಅಗಲಿದ ಈ ಮಹಾನ್ ಚೇತನಕ್ಕೆ ನಮನ.

Related Articles

Leave a Reply

Your email address will not be published. Required fields are marked *

Back to top button

You cannot copy content of this page

Adblock Detected

Please consider supporting us by disabling your ad blocker