ನೋಂದಣಿಯ ಪ್ರಶ್ನೆ ಕೇವಲ ಕಾನೂನಿನದ್ದಲ್ಲ ನೈತಿಕತೆಯದ್ದು ಕೂಡಾ

ಲೇಖಕರು: ದಿನೇಶ್ ಅಮಿನ್ ಮಟ್ಟು ಹಿರಿಯ ಪತ್ರಕರ್ತರು
ಕೃಪೆ ಸಂಯುಕ್ತ ಕರ್ನಾಟಕ
ಕಳೆದ ನೂರು ವರ್ಷಗಳಲ್ಲಿ ಆರ್ ಎಸ್ ಎಸ್ ಪ್ರಚಾರದ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳದೆ ಒಂದು ಭೂಗತ ಸಂಘಟನೆಯ ರೀತಿಯಲ್ಲಿ ಕೆಲಸ ಮಾಡಿದ್ದೇ ಹೆಚ್ಚು. ಅದರ ಜವಾಬ್ದಾರಿ ಏನಿದ್ದರೂ ಸೂತ್ರಧಾರನದ್ದು, ಪಾತ್ರಧಾರಿಯದ್ದಲ್ಲ. ಸಾಧ್ಯವಿದ್ದಷ್ಟು ವಿವಾದಗಳಿಂದ ದೂರವಿದ್ದು ಅಂತಹ ಸಂದರ್ಭಗಳು ಎದುರಾದರೆ ಉಪಾಯದಿಂದ ಜಾರಿಕೊಳ್ಳುವುದು ಅದರ ಕಾರ್ಯತಂತ್ರ. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆರ್ ಎಸ್ ಎಸ್ ಮೇಲೆ ನಿಷೇಧ ಹೇರಿದಾಗಲೂ ಸಂಘರ್ಷದ ಹಾದಿಗೆ ಇಳಿಯದೆ ಸಂಧಾನದ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಂಡಿತ್ತು ಇದೇ ಅದರ ಶಕ್ತಿ ಮತ್ತು ವೈಶಿಷ್ಟ್ಯ.
ಈ ಬಾರಿ ಮಾತ್ರ ಕರ್ನಾಟಕದ ಗೃಹಸಚಿವ ಪ್ರಿಯಾಂಕ ಖರ್ಗೆ ಅವರು ತೋಡಿರುವ ಖೆಡ್ಡಾದಲ್ಲಿ ಆರ್ ಎಸ್ ಎಸ್ ತಾನಾಗಿಯೇ ಬಂದು ಬಿದ್ದುಬಿಟ್ಟಿದೆ. ಸೂಜಿ ಮೂಲಕ ಬಗೆಹರಿಸಬಹುದಾಗಿದ್ದ ಸಮಸ್ಯೆಯನ್ನು ಆರ್ ಎಸ್ ಎಸ್ ಕತ್ತಿ ಹಿಡಿದು ಎದುರಿಸಲು ಹೊರಟ ಕಾರಣ ಮೈಮೇಲೆಲ್ಲ ಗಾಯಮಾಡಿಕೊಂಡಿದೆ, ಇದೇ ಮೊದಲ ಬಾರಿಗೆ ಆರ್ ಎಸ್ ಎಸ್ ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಗೆ ಗ್ರಾಸವಾಗಿದೆ.
ಆರ್ ಎಸ್ ಎಸ್ ನೋಂದಣಿ ಈಗ ಕೇವಲ ಕಾನೂನಿನ ವಿಷಯವಾಗಿ ಉಳಿದಿಲ್ಲ, ಅದಕ್ಕಿಂತಲೂ ಮೀರಿ ಇದು ನೈತಿಕತೆಯ ಪ್ರಶ್ನೆಯಾಗಿ ಎಲ್ಲೆಡೆ ಸದ್ದು ಮಾಡತೊಡಗಿದೆ. ನೋಂದಣಿಯ ವಿಷಯವನ್ನು ಆರ್ ಎಸ್ ಎಸ್ ಮಾತ್ರವಲ್ಲ ಅದರ ವಿರುದ್ದ ಸಮರ ಸಾರುತ್ತಾ ಬಂದಿರುವ ಸೈದ್ದಾಂತಿಕ ವಿರೋಧಿಗಳಾಗಲಿ, ಅದನ್ನು ಮೂರು ಬಾರಿ ನಿಷೇಧ ಮಾಡಿರುವ ಕಾಂಗ್ರೆಸ್ ಪಕ್ಷವಾಗಲಿ ಇಲ್ಲಿಯ ವರೆಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆರ್ ಎಸ್ ಎಸ್ ನಿಷೇಧ ವಿಚಾರ ಕಾನೂನಿನ ಸಮರವಾಗಿ ಮಾರ್ಪಟ್ಟ ಸಂದರ್ಭದಲ್ಲಿ ನ್ಯಾಯಾಲಯ ಕೂಡಾ ನೋಂದಣಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿರಲಿಲ್ಲ.
ಆದರೆ ಈಗ ಆರ್ ಎಸ್ ಎಸ್ ನೋಂದಣಿ ವಿಚಾರ ಬೀದಿ ಮಾತಾಗಿ ಹೋಗಿದೆ. ಆರ್ ಎಸ್ ಎಸ್ ನ ಸ್ವಯಂಸೇವಕರಲ್ಲದೆ ಇದ್ದರೂ ಈ ಸಂಘಟನೆಯ ಬಗ್ಗೆ ಗೌರವ-ಅಭಿಮಾನ ಇಟ್ಟುಕೊಂಡಿರುವ ಕೋಟ್ಯಂತರ ಹಿಂದುಗಳಿದ್ದಾರೆ. ಅವರಲ್ಲಿ ಬಹಳ ಮಂದಿ ಆರ್ ಎಸ್ ಎಸ್ ಎಂದರೆ ಪರಿಶುದ್ದ, ಪ್ರಾಮಾಣಿಕ, ನಿಸ್ವಾರ್ಥ ಮತ್ತು ನೆಲದ ಕಾನೂನಿಗೆ ತಲೆಬಾಗುವ ಶಿಸ್ತು ಬದ್ದ ಸಂಘಟನೆ ಎಂದೇ ತಿಳಿದುಕೊಂಡಿದ್ದರು. ಆರ್ ಎಸ್ ಎಸ್ ಎನ್ನುವುದು ಯಾವುದೇ ಸಂಘಟನೆಗೆ ಒಂದು ಮಾದರಿ ಎಂದು ಅವರು ಅಭಿಮಾನ ಪಡುತ್ತಿದ್ದವರು. ಆದರೆ ನೋಂದಣಿ ವಿವಾದ ಅವರ ಮನಸ್ಸಿನಲ್ಲಿಯೂ ಸಂಶಯದ ಬೀಜ ಮೊಳೆಯಲು ಕಾರಣವಾಗಿದೆ. ಇಷ್ಟೊಂದು ಸಣ್ಣ ವಿಷಯಕ್ಕಾಗಿ ಆರ್ ಎಸ್ ಎಸ್ ಹಠ ಹಿಡಿಯುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಸಾಮಾನ್ಯ ಜನರಲ್ಲಿಯೂ ಮೂಡಿದೆ. ಇಷ್ಟರ ಮಟ್ಟಿಗೆ ಪ್ರಿಯಾಂಕ ಖರ್ಗೆ ಅವರ ಉದ್ದೇಶ ಈಡೇರಿದೆ.

ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ಸ್ಥಾಪಿಸುವ ಅವಕಾಶವನ್ನು ಪರಿಚ್ಚೇದದ 19 (1) (ಸಿ) ಮೂಲಕ ಮೂಲಭೂತ ಹಕ್ಕಾಗಿ ನೀಡಿದೆ. ಈ ಸಂಘ, ಒಕ್ಕೂಟ ಮತ್ತು ಸಹಕಾರ ಸಂಘಗಳನ್ನು ನೋಂದಣಿ ಮಾಡಲೇಬೇಕೆಂದು ಸಂವಿಧಾನ ಹೇಳಿಲ್ಲ ಎನ್ನುವುದು ನಿಜ. ಆದರೆ ಇದೇ ಸಂವಿಧಾನ, ಸಂಘ, ಒಕ್ಕೂಟ, ಸಹಕಾರ ಸಂಘಗಳ ಸ್ಥಾಪನೆಯ ಮೂಲಭೂತ ಹಕ್ಕಿಗೆ ಪರಿಚ್ಛೇದ 19(4)ರಲ್ಲಿ ಕೆಲವು ನಿರ್ಬಂಧಗಳನ್ನು ಹೇರಿದೆ. ದೇಶದ ಅಖಂಡತೆ, ಸೌರ್ವಭೌಮತ್ವ, ಸಾರ್ವಜನಿಕ ಶಾಂತಿಮತ್ತು ಸುವ್ಯವಸ್ಥೆಗೆ ಧಕ್ಕೆ ಎದುರಾದ ಸಂದರ್ಭ ಎದುರಾದರೆ ಈ ಮೂಲಭೂತ ಹಕ್ಕಿನ ನಿಯಂತ್ರಣಕ್ಕೆ ಸಂವಿಧಾನ ಪರಿಚ್ಛೇದ 19(4)ರಲ್ಲಿ ಅವಕಾಶ ನೀಡಿದೆ.
ಕೇಂದ್ರ ಸರ್ಕಾರ ಹಿಂದೆ ಮೂರು ಬಾರಿ ಸಂವಿಧಾನದ ಪರಿಚ್ಛೇದ 19(4)ರ ಅಡಿಯಲ್ಲಿಯೇ ಆರ್ ಎಸ್ ಎಸ್ ಮೇಲೆ ನಿಷೇಧ ಹೇರಿದ್ದು ಎನ್ನುವುದನ್ನು ಮರೆಯಬಾರದು. ಕಾನೂನು ಉಲ್ಲಂಘಣೆಯ ಇಂತಹದ್ದೊಂದು ಇತಿಹಾಸ ಇರುವ ಸಂಘಟನೆಗೆ ಸಾಮಾನ್ಯ ಸಂಘಟನೆಗಳಿಗೆ ನೀಡಲಾಗಿರುವ ವಿನಾಯಿತಿ-ರಿಯಾಯಿತಿಗಳನ್ನು ಅನ್ವಯಿಸಬಹುದೇ ಎನ್ನುವುದು ಈಗಿನ ಪ್ರಶ್ನೆ.
ನೊಂದಾಯಿತ ಅಲ್ಲದ ಸಂಸ್ಥೆಗಳು ತನ್ನ ಸದಸ್ಯತ್ವದ ದಾಖಲೆಯನ್ನು ಇಟ್ಟುಕೊಳ್ಳಬೇಕಾಗಿಲ್ಲ, ಹಣಕಾಸಿನ ವ್ಯವಹಾರದ ವಿವರವನ್ನು ಅಧಿಕೃತವಾಗಿ ಬಿಡುಗಡೆ ಮಾಡಬೇಕಾಗಿಲ್ಲ. ಈ ಅವಕಾಶವನ್ನು ಬಳಸಿಕೊಂಡಿರುವ ಆರ್ ಎಸ್ ಎಸ್ ತನ್ನ ಸದಸ್ಯರ ರಿಜಿಸ್ಟ್ರರ್ ಅನ್ನು ಇಟ್ಟಿಲ್ಲ. ತನ್ನ ಸದಸ್ಯರಿಗೆ ಸದಸ್ಯತ್ವದ ಚೀಟಿಯನ್ನೂ ನೀಡುವುದಿಲ್ಲ, ಅವರಿಂದ ಸದಸ್ಯತ್ವದ ಶುಲ್ಕವನ್ನೂ ಸಂಗ್ರಹಿಸುವುದಿಲ್ಲ. ದೈನಂದಿನ ಶಾಖೆಗಳಲ್ಲಿ ಭಾಗವಹಿಸುವ ಮೂಲಕ ಯಾರಾದರೂ ಅದರ ಸದಸ್ಯರಾಗಬಹುದು. ಇದರಿಂದಾಗಿ ಸಜ್ಜನರ ಜೊತೆಯಲ್ಲಿ ಅನೇಕ ದುರ್ಜನರು ಕೂಡಾ ಸುಲಭದಲ್ಲಿ ಆರ್ ಎಸ್ ಎಸ್ ಜೊತೆ ಸೇರಿಕೊಳ್ಳಬಹುದಾಗಿದೆ.
ಒಂದೆಡೆ, ಆರ್ ಎಸ್ ಎಸ್ ತಮ್ಮಲ್ಲಿ 50-60 ಲಕ್ಷ ಸದಸ್ಯರಿದ್ದಾರೆ, 89,000 ಕ್ಕೂ ಹೆಚ್ಚು ಶಾಖೆಗಳು ಇವೆ ಎಂದು ತನ್ನ ಹಿರಿಮೆಯನ್ನು ಸಾರುತ್ತಿದೆ. ಇನ್ನೊಂದೆಡೆ ‘’ ಆರ್ ಎಸ್ ಎಸ್ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘ’’ ಎಂದು ಸಾಕ್ಷಾತ್ ಪ್ರಧಾನ ಮಂತ್ರಿಗಳೇ ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಆದರೆ ಇಂತಹ ಸಂಘದಲ್ಲಿ ಸದಸ್ಯರ ರಿಜಿಸ್ಟ್ರರ್ ಕೂಡಾ ಇಲ್ಲ. ಆರ್ ಎಸ್ ಎಸ್ ಸರಳ ಪ್ರಕ್ರಿಯೆಯಾಗಿರುವ ನೋಂದಣಿಯನ್ನು ಯಾಕೆ ಮಾಡುತ್ತಿಲ್ಲ ಎನ್ನುವುದಕ್ಕೆ ಕಾರಣಗಳು ಬೇರೆ ಇವೆ.
ಮಹಾತ್ಮಗಾಂಧಿ ಹತ್ಯೆಯ ದಿನಗಳಿಂದ ಹಿಡಿದು ಇಂದು ದೇಶದ ವಿವಿಧೆಡೆಗಳಲ್ಲಿ ನಿತ್ಯ ನಡೆಯುತ್ತಿರುವ ಕೋಮು ಗಲಭೆಗಳ ವರೆಗೆ ಬಹುತೇಕ ಪ್ರಕರಣಗಳಲ್ಲಿ ಆರ್ ಎಸ್ ಎಸ್ ಹೆಸರು ಮುನ್ನೆಲೆಗೆ ಬರುತ್ತಿದೆ. ಈ ಅಪರಾಧ ಕೃತ್ಯಗಳಲ್ಲಿ ಆರೋಪಿಗಳಾದವರು ಆರ್ ಎಸ್ ಎಸ್ ಜೊತೆಗಿನ ತಮ್ಮ ಸೈದ್ದಾಂತಿಕ ಸಂಬಂಧವನ್ನು ಎದೆ ತಟ್ಟಿಕೊಂಡು ಹೇಳುತ್ತಾರೆ. ಆದರೆ ಆರ್ ಎಸ್ ಎಸ್ ನೋಂದಾಯಿತ ಸಂಸ್ಥೆ ಅಲ್ಲದ ಒಂದು ಕಾರಣದಿಂದಾಗಿ ಕಾನೂನಿನ ಕೈಗಳಿಗೆ ಅದನ್ನು ಮುಟ್ಟಲಾಗುತ್ತಿಲ್ಲ.
ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹತ್ಯೆಗೈದ ನಾಥುರಾಮ್ ಗೋಡ್ಸೆ ಆರ್ ಎಸ್ ಎಸ್ ಜೊತೆಗಿನ ತನ್ನ ಸಂಬಂಧವನ್ನು ಕೊನೆಯದಿನಗಳಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದ. ಆದರೆ ಅಧಿಕೃತ ಸದಸ್ಯತ್ವವೇ ಇಲ್ಲದಿದ್ದ ಕಾರಣ ಆರ್ ಎಸ್ ಎಸ್ ಜೊತೆಗಿನ ಆತನ ಸಂಬಂಧವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಒಂದೊಮ್ಮೆ ಆರ್ ಎಸ್ ಎಸ್ ನೊಂದಾಯಿತ ಸಂಸ್ಥೆ ಆಗಿದಿದ್ದರೆ ಕಡ್ಡಾಯವಾಗಿ ಲಿಖಿತ ರೂಪದ ಸದಸ್ಯತ್ವವನ್ನು ನೀಡಬೇಕಾಗಿರುತ್ತಿತ್ತು.
ಅಂತಹದ್ದೊಂದು ವ್ಯವಸ್ಥೆಯಲ್ಲಿ ಗೋಡ್ಸೆ ಜೊತೆಯಲ್ಲಿ ಆರ್ ಎಸ್ ಎಸ್ ಕೂಡಾ ಅಪರಾಧಿಯ ಕಟಕಟೆಯಲ್ಲಿ ನಿಲ್ಲಬೇಕಾಗಿರುತ್ತಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯ ವರೆಗೆ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೋಮುಗಲಭೆಗಳು ನಡೆದಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಂಘ ಪರಿವಾರಕ್ಕೆ ಸೇರಿರುವ ಹಲವಾರು ಸಂಘಟನೆಗಳ ನಾಯಕರು ಕಾನೂನಿನ ಕಟಕಟೆಯಲ್ಲಿ ಬಂದು ನಿಂತಿದ್ದಾರೆ, ಶಿಕ್ಷೆ ಅನುಭವಿಸಿದ್ದಾರೆ. ಆದರೆ ಎಲ್ಲಿಯೂ ಆರ್ ಎಸ್ ಎಸ್ ನ ಒಬ್ಬ ನಾಯಕನ ಬಟ್ಟೆ ಮೇಲೆ ಅಪರಾಧದ ಸಣ್ಣ ಕಲೆಯೂ ಇಲ್ಲ.
ಮೇಲ್ನೋಟಕ್ಕೆ ಸರಳವಾಗಿ ಕಾಣುವ ನೋಂದಣಿಯನ್ನು ಮಾಡಿಕೊಳ್ಳಲು ಆರ್ ಎಸ್ ಎಸ್ ಯಾಕೆ ನಿರಾಕರಿಸುತ್ತಿದೆ ಎನ್ನುವುದಕ್ಕೆ ಇದೇ ನಿಜವಾದ ಕಾರಣ ಎನ್ನುವುದು ನಿಸ್ಸಂಶಯ. ನೊಂದಣಿ ಮಾಡಿಕೊಂಡರೆ ಹಣಕಾಸಿನ ವ್ಯವಹಾರವನ್ನು ಬಹಿರಂಗಪಡಿಸಬೇಕಾಗುತ್ತದೆ ಎನ್ನುವ ಆತಂಕವೂ ಆರ್ ಎಸ್ ಎಸ್ ನಲ್ಲಿರಬಹುದು.
ಆದರೆ ಈಗ ನೋಂದಣಿ ವಿಚಾರ ಕೇವಲ ಕಾನೂನಿಗೆ ಸೀಮಿತವಾಗಿ ಉಳಿದಿಲ್ಲ, ಅದು ನೈತಿಕ ಪ್ರಶ್ನೆಯಾಗಿ ಆರ್ ಎಸ್ ಎಸ್ ಅನ್ನು ಕಾಡತೊಡಗಿದೆ. ಚಾರಿತ್ರ್ಯನಿರ್ಮಾಣದ ಉದ್ದೇಶದ ಆರ್ ಎಸ್ ಎಸ್ ಬಹಳ ದಿನ ಈ ನೈತಿಕತೆಯ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಾರದು.



